ಕಳೆದ ಮೂರು ತಿಂಗಳಿನಿಂದ ಮುಡಾ ಪ್ರಕರಣದ ಬಗ್ಗೆ ಮಾಧ್ಯಮಗಳು ಸಾಕಷ್ಟು ಮಾತನಾಡುತ್ತಿವೆ. ಮಾಧ್ಯಮಗಳ ವ್ಯಾದಿ ಏನೆಂದರೆ, ಸಂವಿಧಾನವನ್ನ ಬದಲಾವಣೆ ಮಾಡುವುದು. ರಾಹುಲ್ ಗಾಂಧಿ ಅವರನ್ನ ಪಪ್ಪು ಎಂದು ಬಿಂಬಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಭ್ರಷ್ಟ ಎಂಬ ಹಣೆಪಟ್ಟಿ ಕಟ್ಟುವುದಾಗಿದೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲದಿದ್ದರೂ, ಅವರನ್ನ ಎಳೆದು ತರಲಾಗುತ್ತಿದೆ. ಸಿದ್ದರಾಮಯ್ಯ ಅವರ ರಾಜಕಾರಣಕ್ಕೆ ಮಸಿ ಬಳಿಯುವ ಉದ್ದೇಶದಿಂದ ಈ ಪಿತೂರಿ ನಡೆಯುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಬಾಬಾ ಸಾಹೇಬ್ ಜಿನರಲಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ‘ಕರ್ನಾಟಕ ಜಾಗೃತ ವಕೀಲರ ವೇದಿಕೆ’ಯು ‘ರಾಜಕೀಯ ಪಿತೂರಿಗಳು ಮತ್ತು ನ್ಯಾಯಾಲಯದ ಇತ್ತೀಚಿನ ಆದೇಶಗಳು’ ಚಿಂತನಾ ಸಮಾವೇಶ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ, ‘ಮುಡಾ ಪ್ರಕರಣ: ಕೋರ್ಟ್ಗಳ ಆದೇಶ – ಸತ್ಯಾಸತ್ಯತೆ’ ಪುಸ್ತಕವನ್ನೂ ಬಿಡುಗಡೆ ಮಾಡಿ, ಅವರು ಮಾತನಾಡಿದರು.
“ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಅಧಿಕಾರದಿಂದ ಅನುಚಿತ ಪ್ರಭಾವ ಬೀರಿದ್ದಾರೆಂದು ಆರೋಪಿಸಲಾಗುತ್ತಿದೆ. ಪತ್ರಿಕೆಗಳಲ್ಲಿಯೂ ಇದೇ ವರದಿಯಾಗುತ್ತಿದೆ. ಮಾಧ್ಯಮಗಳ ವರದಿಯನ್ನೇ ನ್ಯಾಯಾಲಯ ಎತ್ತಿ ಹಿಡಿದಿದೆ. ಆದರೆ, ನ್ಯಾಯಾಲಯವು ಸಾಕ್ಷ್ಯಾಧಾರಗಳನ್ನು ಪಡೆಯಬೇಕು. ಅವುಗಳನ್ನು ಎತ್ತಿ ಹಿಡಿಯಬೇಕು” ಎಂದಿದ್ದಾರೆ.
“ದೂರುದಾರರು ಸ್ನೆಹಮಯಿ ಕೃಷ್ಣ ಹಾಗೂ ಅಬ್ರಹಾಂ ಕನ್ನಡದಲ್ಲಿ ಬರೆದ 1,200 ಪುಟಗಳ ದಾಖಲೆಯನ್ನು ರಾಜ್ಯಪಾಲರಿಗೆ ನೀಡಿದ್ದಾರೆ. ಕನ್ನಡ ಓದುವುದಕ್ಕೆ ಬರದ ರಾಜ್ಯಪಾಲರು ಸಾಯಂಕಾಲದ ಒಳಗೆ ಮುಖ್ಯಮಂತ್ರಿ ಅವರಿಗೆ ಶೋಕಾಸ್ ನೋಟಿಸ್ ನೀಡುತ್ತಾರೆ. ಅದೇ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ಸೇರಿದಂತೆ ಇನ್ನಿತರರ ವಿರುದ್ಧ ಅರ್ಜಿಗಳು ಇನ್ನು ಕೂಡಾ ರಾಜ್ಯಪಾಲರ ಕಚೇರಿಯಲ್ಲಿಯೇ ಉಳಿದಿವೆ. ಆದರೆ, ಸಿದ್ದರಾಮಯ್ಯ ವಿರುದ್ದ ತರಾತುರಿಯಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿದೆ. ಅಂದರೆ, ಇದು ಪೂರ್ವನಿಯೋಜಿತ” ಎಂದು ಆರೋಪಿಸಿದ್ದಾರೆ.
“ದೂರುದಾರ ಟಿ.ಜೆ ಅಬ್ರಹಾಂ ರೌಡಿಶೀಟರ್ ಎಂದೂ ಹೇಳಲಾಗುತ್ತಿದೆ. ಆತನಿಗೆ ಸುಪ್ರೀಂ ಕೋರ್ಟ್ ಕೂಡ ದಂಡ ಹಾಕಿದೆ. ರಾಜ್ಯಪಾಲರು ಈ ಪ್ರಕರಣದಲ್ಲಿ ಅತಿಯಾದ ಆಸಕ್ತಿ ತೋರಿದ್ದಾರೆ. ಸಿದ್ದರಾಮಯ್ಯರನ್ನು ಪ್ರಕರಣದಲ್ಲಿ ಸಿಕ್ಕಿ ಹಾಕಿಸುವ ತಂತ್ರ ನಡೆದಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ರೂಪಾಯಿ ನೋಟುಗಳಲ್ಲಿ ಗಾಂಧೀಜಿ ಚಿತ್ರ ಮೊದಲ ಆಯ್ಕೆಯಾಗಿರಲಿಲ್ಲ; ಮತ್ಯಾರು?
“ಬಿಜೆಪಿ ಮಾಜಿ ಸಂಸದ ಸಂವಿಧಾನವನ್ನ ಬದಲಾವಣೆ ಮಾಡೋಕೆ ಬಂದಿದೀವಿ ಎಂದು ಬಹಿರಂಗವಾಗಿ ಹೇಳುತ್ತಿದ್ದರು. ಈಗಲೂ ಬಿಜೆಪಿಗರು ಸಂವಿಧಾನದ ವಿರುದ್ಧ ಮಾತನಾಡುತ್ತಿದ್ದಾರೆ. ನಾವು ಸುಮ್ಮನೆ ಇದ್ದರೆ, ಮನುಸ್ಮೃತಿಯನ್ನು ನಮ್ಮ ಮೇಲೆ ಹೇರುತ್ತಾರೆ. ತಮ್ಮ ಆದೇಶದಲ್ಲಿ ಮನುಸ್ಮೃತಿಯ ಉಲ್ಲೇಖ ಮಾಡಿದ್ದ ಜಡ್ಜ್ ಜಾಗದಲ್ಲಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಜಡ್ಜ್ಯಿದ್ದು, ಅವರು ಕುರಾನ್ ಅಥವಾ ಬೈಬಲ್ ಅನ್ನು ಉಲ್ಲೇಖಿಸಿದ್ದರೆ, ಏನಾಗುತ್ತಿತ್ತು. ಆರ್ಎಸ್ಎಸ್, ಬಜರಂಗದಳ ಏನು ಮಾಡುತ್ತಿದ್ದವು. ಇದೆಲ್ಲವನ್ನೂ ನಾವು ಅರ್ಥ ಮಾಡಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲ ಅನಂತ್ ನಾಯ್ಕ್, “ಸಾಮಾಜಿಕ ನ್ಯಾಯಕ್ಕಾಗಿ ದುಡಿಯುತ್ತಿರುವ ಸಿದ್ದರಾಮಯ್ಯ ಅವರನ್ನು ಅಸ್ಥಿರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ರಾಜ್ಯ ಸರ್ಕಾರವನ್ನು ಮಾತ್ರವಲ್ಲ, ಬಾಬಾ ಸಾಹೇಬ್ ಅಂಬೆಡ್ಕರ್ ಬರೆದ ಸಂವಿಧಾನವನ್ನೂ ಬುಡಮೇಲು ಮಾಡುವ ಷಡ್ಯಂತ್ರ ಇದೆ. ಸಂವಿಧಾನವನ್ನು ಸಂರಕ್ಷಿಸಲು ಎಲ್ಲರೂ ಹೋರಾಟ ಮಾಡಬೇಕಿದೆ” ಎಂದು ಹೇಳಿದ್ದಾರೆ.