ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ ನಗರದ ಶಾಸಕರೆಲ್ಲರೂ ಗಮನಕ್ಕೆ ತಂದಿದ್ದರು. ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ರಸ್ತೆ ಗುಂಡಿ ಗಮನ ತಂತ್ರಾಂಶ ಸಿದ್ದಪಡಿಸಿದ್ದೇವೆ. ಪೊಲೀಸರಿಗೂ ಅವರ ಠಾಣೆಗಳ ವ್ಯಾಪ್ತಿಯಲ್ಲಿ ಗುಂಡಿಗಳಿರುವ ಪಟ್ಟಿ ಕೊಡಲು ತಿಳಿಸಲಾಗಿತ್ತು. ಆ್ಯಪ್ನಲ್ಲಿ ನಾಗರೀಕರು ದೂರುಗಳನ್ನು ಸಲ್ಲಿಸುತ್ತಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರು ನಗರದ ಬಾಗಲೂರು ಬಸ್ ನಿಲ್ದಾಣದ ಬಳಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ ನಡೆಸಿದ ವೇಳೆ ಅವರು ಮಾಧ್ಯಮಗಳಿಗೆ ಸೋಮವಾರ ಮಧ್ಯರಾತ್ರಿ ಪ್ರತಿಕ್ರಿಯೆ ನೀಡಿದರು.
“ಇತ್ತೀಚೆಗೆ ಬಾಗಲೂರು ರಸ್ತೆಯಲ್ಲಿ ಹೋದಾಗ ರಸ್ತೆ ಸ್ಥಿತಿ ನೋಡಿ ಬೇಸರವಾಗಿತ್ತು. ನಗರದ ಎಲ್ಲಾ ಕಡೆ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. 5000ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 4400 ರಸ್ತೆ ಗುಂಡಿಗಳನ್ನು ಆದ್ಯತೆ ಮೇಲೆ ಮುಗಿಸಲು ಸೂಚನೆ ನೀಡಲಾಗಿದೆ. ಅದರಂತೆ ಕಳೆದ 4 ದಿನಗಳಿಂದ 2200 ಗುಂಡಿಗಳನ್ನು ಮುಚ್ಚಲಾಗಿದೆ” ಎಂದು ಹೇಳಿದರು.
“ನಗರದಲ್ಲಿ ಸ್ವಚ್ಛತೆ ಕಾಪಾಡುವ ಕೆಲಸ ಮಾಡಲಾಗುತ್ತಿದ್ದು, ಸ್ಕೈವಾಕ್ ಗಳನ್ನು ಸ್ವಚ್ಛ ಮಾಡಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಿ ಹೋಗುವುದು ಮಾತ್ರವಲ್ಲ, ಗುಣಮಟ್ಟದ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಹಾಗೂ ಇಕೋಫಿಕ್ಸ್ ಸೇರಿದಂತೆ ಮೂರೂ ಮಾದರಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗುತ್ತಿದೆ” ಎಂದು ತಿಳಿಸಿದರು.
‘ರಸ್ತೆ ನಿರ್ಮಾಣ ಮಾಡುವಾಗ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕಲ್ಲವೇ ಎಂಬ ಪ್ರಶ್ನೆಗೆ,’ ಬಾರೀ ವಾಹನಗಳ ಓಡಾಟ, ಮಳೆಗಾಲ ಸೇರಿದಂತೆ ಇನ್ನಿತರೆ ಸಮಸ್ಯೆಗಳು ಇರುತ್ತವೆ. ಅದಕ್ಕಾಗಿ ಹಂತ-ಹಂತವಾಗಿ ಕಾಂಕ್ರೀಟ್ ರಸ್ತೆ ಮಾಡಲಾಗುತ್ತಿದೆ. ಇದು 30 ವರ್ಷ ಬಾಳಿಕೆ ಬರಲಿದೆ ಎಂದರು.
‘ಗುಂಡಿಗಳಿಂದಲೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ’, ‘ಹೆಣ್ಣು ಮಕ್ಕಳನ್ನು, ಚಿಕ್ಕ ಮಕ್ಕಳನ್ನು ಕರೆದೊಯ್ಯುವಾಗ ತೊಂದರೆಗಳಾಗುವುದನ್ನು ನಾನು ಗಮನಿಸಿದ್ದೇನೆ. ಅದಕ್ಕಾಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ರಸ್ತೆ ಗುಂಡಿಗಳ ಮೇಲ್ಚಿಚಾರಣೆಗಾಗಿಯೇ ರಸ್ತೆ ಗುಂಡಿ ಗಮನ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ’ ಎಂದು ಹೇಳಿದರು.