“ರಾಜ್ಯದ ಜನತೆಯಿಂದ ಆಯ್ಕೆಯಾಗಿ ದೆಹಲಿಗೆ ಹೋದ 28 ಸಂಸದರು ತಾವು ಕರ್ನಾಟಕದ ಜನರ ಪ್ರತಿನಿಧಿಗಳು ಎನ್ನುವುದನ್ನು ಮರೆತು, ಕೇವಲ ಕೇಂದ್ರ ಸರ್ಕಾರ ಓಲೈಸುವುದರಲ್ಲಿ ಮಗ್ನರಾಗಿದ್ದಾರೆ” ಎಂದು ಕರ್ನಾಟಕ ರಕ್ಷಣಾ ವೇದಿಕೆ(ಟಿಎ ನಾರಾಯಣಗೌಡ ಬಣ) ಮಹಿಳಾ ಹೋರಾಟಗಾರರು ರಾಜ್ಯ ಸಂಸದರ ಭಾವಚಿತ್ರಗಳಿಗೆ ಹಾರ ಹಾಕಿ, ಧಿಕ್ಕಾರ ಕೂಗಿದರು.
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಎಲ್ಲೆಡೆ ಪ್ರತಿಭಟನೆಗಳು, ಸರ್ಕಾರದ ವಿರುದ್ಧ ಆಕ್ರೋಶಗಳು ಕೇಳಿಬರುತ್ತಿವೆ. ಸೆ.29 ರಂದು ಹಲವಾರು ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ಅವರ ನೇತೃತ್ವದಲ್ಲಿ ಗಾಂಧಿನಗರದ ಕೇಂದ್ರ ಕಚೇರಿಯಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ರ್ಯಾಲಿ ನಡೆಯಿತು. ಈ ವೇಳೆ, ಪ್ರತಿಭಟನಾಕಾರರು ರಾಜ್ಯ ಸಂಸದರ ಭಾವಚಿತ್ರಗಳಿಗೆ ಹಾರ ಹಾಕಿ, ಧಿಕ್ಕಾರ ಕೂಗಿದರು. ಸಂಸದರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, “ಕಾವೇರಿ ನೀರು ನಿಯಂತ್ರಣ ಮಂಡಳಿ (ಸಿಡಬ್ಲೂಆರ್ಸಿ) ಹಾಗೂ ಪ್ರಾಧಿಕಾರದಿಂದ (ಸಿಡಬ್ಲೂಎಮ್ಎ) ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಇಷ್ಟಾದರೂ ರಾಜ್ಯದ ಪರವಾಗಿ ಕೇಂದ್ರ ಸರ್ಕಾರದ ಮುಂದೆ ರಾಜ್ಯದ 28 ಸಂಸದರು ಬಾಯಿಬಿಡುತ್ತಿಲ್ಲ. ತಮಿಳುನಾಡಿನ ಡಿಎಂಕೆ ಮತ್ತು ಅಣ್ಣಾಡಿಎಂಕೆ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ, ಪಟ್ಟುಹಿಡಿದು ತಮ್ಮ ರಾಜ್ಯಕ್ಕೆ ನೀರು ಬಿಡಿಸಿಕೊಳ್ಳುತ್ತಾರೆ. ಇದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ಬಂದ್ | ನಾಳೆ ಎಂದಿನಂತೆ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ
“ತಮಿಳುನಾಡು ಸಂಸದರು ಪಟ್ಟು ಹಿಡಿದು ನೀರು ಬಿಡಿಸಿಕ್ಕೊಳ್ಳುತ್ತಾರೆ. ಆದರೆ, ನಮ್ಮ ರಾಜ್ಯದ ಸಂಸದರು ಏನು ಮಾತನಾಡದೆ ಸುಮ್ಮನೆ ಇದ್ದಾರೆ. ರಾಜ್ಯದ ಸಂಸದರಿಗೆ ತಾಕತ್ತಿಲ್ವವಾ? ನಮ್ಮ ಹಾಗೇ ಅವರು ಕಾವೇರಿ ನೀರು ಕುಡಿಯುವುದಿಲ್ಲವಾ?” ಎಂದು ಪ್ರಶ್ನಿಸಿದರು.
“ರಾಜ್ಯದ ಸಂಸದರು ಕರ್ನಾಟಕದ ಜನಪ್ರತಿನಿಧಿಗಳು ಎಂದು ಮರೆತಿದ್ದಾರೆ. ಹಾಗಾಗಿ, ಅವರಿಗೆ ಬಿಸಿ ಮುಟ್ಟಿಸಲು ಈ ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದರು.
ಕರ್ನಾಟಕದ ಸಂಸದರು ಮತ್ತು ಕೇಂದ್ರ ಮಂತ್ರಿಗಳು ಪ್ರಧಾನಮಂತ್ರಿ ಎದುರು ನಿಂತು ಮಾತಾಡುವ ತಾಕತ್ತು ಕಳ್ಕೊಂಡು ಬಿಟ್ಟಿದ್ದಾರೆ,,, ಹಿಂದೂ ಮುಸ್ಲಿಂ ಕ್ರೈಸ್ತ ದ್ವೇಷ ಭಾಷಣ ಮಾಡುವುದು,, ರೋಡ್ ಶೋ ಟೈಂ ನಲ್ಲಿ ರಸ್ತೆ ಬದಿಯಲ್ಲಿ ನಿಂತು ಕೈಬೀಸಲು ಮಾತ್ರ ಸೀಮಿತ ಆಗಿದ್ದಾರೆ,, ಇಂಥವರಿಂದಲೆ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ