ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ. 87 ಪೊಲೀಸರು ಸ್ಥೂಲಕಾಯ, ಬೊಜ್ಜು ಅಥವಾ ಕಡಿಮೆ ತೂಕದಿಂದ ಬಳಲುತ್ತಿರುವುದು ಫಿಟ್ನಸ್ ಪರೀಕ್ಷೆಯಿಂದ ಬಹಿರಂಗಗೊಂಡಿದೆ. 16,296 ಪೊಲೀಸರಲ್ಲಿ 18,665 ಸಿಬ್ಬಂದಿ ಸ್ಥೂಲಕಾಯ, ಬೊಜ್ಜು ಅಥವಾ ಕಡಿಮೆ ತೂಕದಂತಹ ಅನಾರೋಗ್ಯಕರ ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) ಹೊಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
16,226 ಮಂದಿ ಪೊಲೀಸರಲ್ಲಿ 7550 ಮಂದಿ ಬೊಜ್ಜು, 3746 ಮಂದಿ ಸ್ಥೂಲಕಾಯ ಹಾಗೂ 5000 ಮಂದಿ ಕಡಿಮೆ ತೂಕ ಹೊಂದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2369 ಪೊಲೀಸರು, ಅಂದರೆ ಕಾರ್ಯಪಡೆಯಲ್ಲಿರುವ ಶೇ.13 ರಷ್ಟು ಮಂದಿ ಮಾತ್ರ ಸಾಮಾನ್ಯ ತೂಕವನ್ನು ಹೊಂದಿದ್ದು,ದೈಹಿಕವಾಗಿ ಸದೃಢವಾಗಿದ್ದಾರೆ.
“ಅನಿಯಮಿತ ಕೆಲಸದ ಅವಧಿ, ದೋಷಪೂರಿತ ಆಹಾರ ಪದ್ಧತಿ, ತೀವ್ರ ಒತ್ತಡ ಹಾಗೂ ಕಳಪೆ ಆಹಾರ ಶೈಲಿಯಿಂದಾಗಿ ಈ ಸಮಸ್ಯೆಗಳು ಉಂಟಾಗಿದೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ಒಂದು ವರ್ಷ, ಸಮರ್ಥನೀಯವಲ್ಲದ ನಡೆ
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ಶೇ.15 ರಿಂದ 20 ರಷ್ಟು ಹುದ್ದೆಗಳು ಖಾಲಿಯುದ್ದು ದೀರ್ಘಕಾಲದಿಂದ ಈ ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ. ಆದಾಗ್ಯೂ ನೇಮಕಾತಿ ಪ್ರಕ್ರಿಯೆ ಪ್ರಕ್ರಿಯೆಯಲ್ಲಿದೆ. ಒತ್ತಡದ ಕೆಲಸದಿಂದಾಗಿ ಪೊಲೀಸರಲ್ಲಿ ಈ ರೀತಿಯ ಸಮಸ್ಯೆಗಳು ಕಂಡುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕಡಿಮೆ ಸಿಬ್ಬಂದಿ ಇರುವ ಕಾರಣದಿಂದ ಹಾಲಿಯಿರುವ ಅಧಿಕಾರಿಗಳೆ ಕೆಲಸ ನಿರ್ವಹಿಸುತ್ತಿರುವುದರಿಂದ ಹೆಚ್ಚು ಒತ್ತಡವುಂಟಾಗಿ ಬೊಜ್ಜಿನ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ.
ಪೊಲೀಸ್ ಇಲಾಖೆಯ ಸಿಬ್ಬಂದಿ ಅಪಾರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಕೆಲವು ಸಂದರ್ಭದಲ್ಲಿ ಸಿಬ್ಬಂದಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಒತ್ತಡದ ಕೆಲಸದಿಂದ ಮಾನಸಿಕ ಸಮಸ್ಯೆಗಳು ಶುರುವಾಗಿ ದೈಹಿಕ ಸಮಸ್ಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಆಯುಕ್ತರಾದ ದಯಾನಂದ ಹೇಳುತ್ತಾರೆ.
ಒತ್ತಡದಿಂದ ಉಂಟಾಗುವ ಅಸ್ವಸ್ಥತೆ ಹಾಗೂ ವ್ಯಸನಗಳು ಪ್ರಮುಖ ಸಮಸ್ಯೆಗಳಾಗಿದ್ದು, ಇದರಿಂದಾಗಿ ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತದೆ.
ಸಿಬ್ಬಂದಿಗಳನ್ನು ಕೆಲವು ಬಾರಿ ಬಂದೂಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಆ ಸಂದರ್ಭದಲ್ಲಿ ನಿರಂತರವಾಗಿ ಕೆಲಸ ಮಾಡಬೇಕಿದ್ದು,ಆಯೋಜಕರು ನೀಡಿದ ಆಹಾರ ಸೇವನೆ ಮಾಡಬೇಕಾಗುತ್ತದೆ. ಕೆಲವು ವೇಳೆ ಈ ಆಹಾರವು ಗುಣಮಟ್ಟದಿಂದ ಕೂಡಿರುವುದಿಲ್ಲ. ಸಮಯಕ್ಕೆ ಸರಿಯಾಗಿ ಕೂಡ ಕೆಲವೊಮ್ಮೆ ಆಹಾರ ನೀಡಲಾಗುವುದಿಲ್ಲ. ಇವೆಲ್ಲ ಕಾರಣಗಳು ಬೊಜ್ಜು ಹಾಗೂ ಇತರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಕೊಲೆ, ಆತ್ಮಹತ್ಯೆ ಹಾಗೂ ಇತರ ಪ್ರಮುಖ ತನಿಖೆಗಳು ನಡೆಸುವುದರಿಂದ ಕೂಡ ಪೊಲೀಸರ ಮಾನಸಿಕ ಆರೋಗ್ಯ ಹದಗೆಡುತ್ತದೆ. ಅನೇಕ ಅಧಿಕಾರಿಗಳಿಗೆ ವಯಸ್ಸಾದ ಕಾರಣ ಅವರಿಗೆ ಸಮಾಲೋಚನೆಯ ಅಗತ್ಯವಿದೆ. ಅವರು ಸಮಾಲೋಚನೆಗೆ ಆಗಮಿಸದ ಕಾರಣ ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ ಅಧಿಕಾರಿಗಳು.
ಪೊಲೀಸ್ ಜೀವನ ಶೈಲಿ ಸಂಪೂರ್ಣ ವಿಭಿನ್ನವಾಗಿರುವುದರಿಂದ, ಸದೃಢತೆ ಕಾಯ್ದುಕೊಳ್ಳಲು ಪೊಲೀಸರಿಗೆ ದೈಹಿಕ ವ್ಯಾಯಾಮ ಅಗತ್ಯವಾಗಿದೆ. ಆದರೆ ಕೆಲಸದ ಅನಿಯಮಿತ ಪರಿಸ್ಥಿತಿಗಳಿಂದ ಫಿಟ್ನೆಸ್ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರ ಜೊತೆ ಧೂಮಪಾನ, ಮದ್ಯಪಾನ ಹಾಗೂ ಕಳಪೆ ಆಹಾರ ಜೀವನ ಶೈಲಿ ಕೂಡ ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
