- ಬೆತ್ತಲೆ ಪರೇಡ್ ನಡೆಸಿ ಅತ್ಯಾಚಾರ ಎಸಗಿದ ಪ್ರಕರಣವು ತಡವಾಗಿ ಬೆಳಕಿಗೆ ಬಂದಿರುವುದು ದುರಂತ
- ಮಣಿಪುರದ ಮುಖ್ಯಮಂತ್ರಿಗಳ ನೇರ ಪಾತ್ರವಿರುವುದು ಸಹ ಈ ಪ್ರಕರಣದಿಂದ ಸಾಬೀತಾಗುತ್ತದೆ
ಮಣಿಪುರದಲ್ಲಿ ನಡೆದಿರುವ ಯುವತಿಯರ ಬೆತ್ತಲೆ ಮೆರವಣಿಗೆಯ ಅಮಾನವೀಯ ಕೃತ್ಯವನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆಯ ಬಳಿ ಮೊಂಬತ್ತಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಿ, ತೀವ್ರ ಖಂಡನೆ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಅವರು, “ಕಳೆದ ಕೆಲವು ತಿಂಗಳಿಂದ ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸೆ, ದೌರ್ಜನ್ಯ ಹಾಗೂ ದಬ್ಬಾಳಿಕೆ ಪ್ರಕರಣಗಳನ್ನು ಬಿಜೆಪಿಯ ನೇತೃತ್ವದ ಕೇಂದ್ರ ಸರ್ಕಾರ ಪೂರ್ವ ಯೋಚಿತವಾಗಿಯೇ ನಡೆಸುತ್ತಿರುವುದು ತೀರ ಖಂಡನೀಯ” ಎಂದರು.
“ಯುವತಿಯರ ಬೆತ್ತಲೆ ಮೆರವಣಿಗೆ ನಡೆಸಿ ಅತ್ಯಾಚಾರ ಎಸಗಿದ ಪ್ರಕರಣವು ತಡವಾಗಿ ಬೆಳಕಿಗೆ ಬಂದಿರುವುದು ದುರಂತ. ನಾಗರಿಕ ಸಮಾಜವೇ ಬೀಳಿಸುವಂತಹ ಇಂತಹ ಆರೋಪಿಗಳನ್ನು ಬಂಧಿಸಿ ಶೀಘ್ರ ಕಠಿಣ ಶಿಕ್ಷೆಗೆ ಒಳಪಡಿಸದಿರುವುದು ಈ ದೇಶದ ದುರಂತ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಶಂಕಿತ ಉಗ್ರನ ಮನೆಯಲ್ಲಿ 4 ಗ್ರೆನೇಡ್ ಪತ್ತೆ
“ಈ ಪ್ರಕರಣ ನಡೆದು ಎರಡು ತಿಂಗಳಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ವರದಿಯಾದ ನಂತರವೂ ಆರೋಪಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳದೆ ಇರುವುದನ್ನು ನೋಡಿದರೆ ಬಿಜೆಪಿ ಸರ್ಕಾರವು ಮಹಿಳೆಯರ ವಿರೋಧಿ ಹಾಗೂ ಅತ್ಯಾಚಾರಿಗಳ ಪರ ಇರುವುದು ಸಾಬೀತಾಗುತ್ತದೆ. ಘಟನೆಯಲ್ಲಿ ಮಣಿಪುರದ ಮುಖ್ಯಮಂತ್ರಿಗಳ ನೇರ ಪಾತ್ರವಿರುವುದು ಸಹ ಈ ಪ್ರಕರಣದಿಂದ ಸಾಬೀತಾಗುತ್ತದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೇಶದ ಜನ ತಕ್ಕ ಪಾಠವನ್ನು ಕಲಿಸಿತ್ತಾರೆ” ಎಂದಿದ್ದಾರೆ.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ, ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ದರ್ಶನ್ ಜೈನ್, ಉಷಾ ಮೋಹನ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.