ಗೌರವಧನವನ್ನು 15,000 ರೂ.ಗೆ ಏರಿಕೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯದ ಎಲ್ಲ ಭಾಗಗಳ ಆಶಾ ಕಾರ್ಯಕರ್ತೆಯರು ರಾಜ್ಯ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರದಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಅವರ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಅವರ ಹೋರಾಟಕ್ಕೆ ಸರ್ಕಾರದಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆ ಹೋರಾಟ ಮುಂದುವರೆಸಿದ್ದಾರೆ. ಸಾವಿರಾರು ಆಶಾ ಕಾರ್ಯಕರ್ತೆಯರು ಮಂಗಳವಾರ ರಾತ್ರಿ ಫ್ರೀಡಂ ಪಾರ್ಕ್‌ನ ಆವರಣ ಮತ್ತು ರಸ್ತೆಗಳಲ್ಲಿಯೇ ಮಲಗಿದ್ದರು. ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಒದಗಿಸುವ ಆಶಾ ಕಾರ್ಯಕರ್ತೆಯರು ರಸ್ತೆಗಳಲ್ಲಿ ಮಲಗಿದ್ದ ಆ ದೃಶ್ಯಗಳು ಮನಕಲಕುವಂತಿದ್ದವು. ಆದರೆ, ಸರ್ಕಾರ ಹೃದಯ ಇನ್ನೂ ಕರಗಿಲ್ಲ.
ಆಶಾ ಕಾರ್ಯಕರ್ತೆಯರ ಹೋರಾಟ ಬುಧವಾರ 2ನೇ ದಿನಕ್ಕೆ ಕಾಲಿಟ್ಟಿದೆ. ತಮ್ಮ ಬೇಡಿಕೆ ಈಡೇರುವವರೆಗೂ ವಾಪಸ್ ಹೋಗುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ಆಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ. ರಾತ್ರಿಯ ಚಳಿ-ಬೆಳಗಿನ ಬಿಸಿಲಿನ ನಡುವೆಯೂ ಆಶಾ ಕಾರ್ಯಕರ್ತೆಯರು ಸ್ವಾತಂತ್ರ್ಯ ಉದ್ಯಾನವನದಲ್ಲೇ ಹೋರಾಟ ನಡೆಸುತ್ತಿದ್ದಾರೆ. ರಾತ್ರಿ ಕೊರೆವ ಚಳಿಯಲ್ಲಿಯೂ ಬಯಲು ಹಾಗೂ ರಸ್ತೆಯಲ್ಲಿ ಆಶಾಗಳು ಮಲಗಿರುವ ದೃಶ್ಯಗಳು ಫ್ರೀಡಂ ಪಾರ್ಕ್‌ನ ಸುತ್ತ ಕಂಡುಬಂದಿವೆ.

ಬುಧವಾರ, ಧರಣಿ ಸ್ಥಳಕ್ಕೆ ಆರೋಗ್ಯ ಇಲಾಖೆಯ ನಿರ್ದೇಶಕಿ ಡಾ. ತ್ರಿವೇಣಿ ಮತ್ತು ಆಶಾ ಕಾರ್ಯಕ್ರಮದ ಉಪ ನಿರ್ದೇಶಕರಾದ ಡಾ. ಪ್ರಭುಗೌಡ ಪಾಟೀಲ್ ಅವರು ಭೇಟಿ ನೀಡಿದ್ದು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ, ಈಗಾಗಲೇ ಹಲವಾರು ಬಾರಿ ಇಂತಹ ಭರವಸೆಗಳನ್ನು ನೀಡಿ, ಸರ್ಕಾರ ಮೋಸ ಮಾಡಿದೆ. ಈ ಬಾರಿ ಮತ್ತೆ ಮೋಸಹೋಗುವ ಮಾತೇ ಇಲ್ಲ. ಭರವಸೆ ಈಡೇರಿದ ನಂತರವೇ ಧರಣಿಯನ್ನು ನಿಲ್ಲಿಸುತ್ತೇವೆಂದು ಹೋರಾಟಗಾರರು ಹೇಳಿದ್ದಾರೆ.

ನಾವು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧದ ಹೋರಾಟ ಇವತ್ತು-ನಿನ್ನೆಯದಲ್ಲ. ಕಳೆದ 15 ವರ್ಷದಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಕೆಲಸ ಆರಂಭಿಸಿದ ಆರು ತಿಂಗಳಲ್ಲಿಯೇ ಸಮಸ್ಯೆಗಳ ಬಗ್ಗೆ ಮೊದಲ ಹೋರಾಟ ನಡೆದಿತ್ತು. ಆಶಾ ಕಾರ್ಯಕರ್ತೆಯರನ್ನು ಸರ್ಕಾರ ನೇಮಿಸಿಕೊಂಡಿತ್ತಾದರೂ, ಅವರ ಬಗ್ಗೆ ಕೇಳುವವರು ಯಾರೂ ಇರಲಿಲ್ಲ. ಕೆಲಸ ಶುರು ಮಾಡಿದಾಗಿನಿಂದ ಈವರೆಗೆ ಹೋರಾಟದ ಮೂಲಕವೇ ಆಶಾ ಕಾರ್ಯಕರ್ತೆಯರು ಪ್ರತಿಯೊಂದು ಸೌಲಭ್ಯಗಳನ್ನು ಪಡೆದಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಒಂದು ‘ಡ್ರೇಸ್ ಕೋಡ್’ ಬೇಕು ಎಂಬ ಹೋರಾಟದ ಮೂಲಕವೇ ಈ ‘ಪಿಂಕ್’ ಬಣ್ಣದ ಸೀರೆಯನ್ನು ಪಡೆದಿದ್ದೇವೆ. ಎಲ್ಲದಕ್ಕೂ ಹೋರಾಟ ಮಾಡಬೇಕಾದ ಅನಿವಾರ್ಹತೆ ಇದೆ. ಗೌರವಧನ ಹೆಚ್ಚಿಸುವವರೆಗೂ ನಾವು ನಮ್ಮೂರುಗಳಿಗೆ ಮರುಳುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಪಟ್ಟುಹಿಡಿದಿದ್ದಾರೆ.