ಆಟೋ ಪ್ರಯಾಣ ದರವನ್ನೂ ಪರಿಷ್ಕರಿಸಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಬೆಂಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆಗಸ್ಟ್ 1 ರಿಂದ ಈ ಆದೇಶ ಜಾರಿಗೆ ಬರಲಿದೆ.
ಆಟೋ ಚಾಲಕರು ನಿಗದಿತ ಪರಿಷ್ಕೃತ ದರದ ಮೂಲ ಪಟಿಯನ್ನು ಆಟೋ ರಿಕ್ಷಾದಲ್ಲಿ ಪ್ರದರ್ಶಿಸಬೇಕು. ಪರಿಷ್ಕೃತ ದರದ ವಿವರ ಮೀಟರ್‌ನಲ್ಲಿ ಪ್ರದರ್ಶನವಾಗುವಂತೆ ಅಕ್ಟೋಬರ್ 31 ರೊಳಗೆ ಪುನಃ ಸತ್ಯಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.
ಸದ್ಯ ಆಟೋ ಪ್ರಯಾಣ ದರವು ಪ್ರತಿ ಕಿ.ಮೀಗೆ 15 ರೂಪಾಯಿ ಇದೆ. ಮೊದಲ 2 ಕಿ.ಮೀಗೆ 30 ರೂ. ಆ ನಂತರ ಪ್ರತಿ ಕಿ.ಮೀಗೆ 15 ರೂ. ಇತ್ತು. ಸದ್ಯ ದರವು ಪ್ರತಿ ಒಂದು ಕಿ.ಮೀಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ.
ರಾಜಧಾನಿಯಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಕಳೆದೊಂದು ವಾರದಲ್ಲಿ ಬರೋಬ್ಬರಿ 1,006 ಆಟೋ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, 233 ಆಟೋಗಳನ್ನು ಜಪ್ತಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದ್ವೀಪದ ಜನರ ಬದುಕನ್ನು ಪ್ರತಿನಿಧಿಸಲಿ ‘ತೂಗು ಸೇತುವೆ’
ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಕಳೆದೊಂದು ವಾರದಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಆರ್‌ಟಿಒ ಅಧಿಕಾರಿಗಳು, ಅಗ್ರಿಗೇಟರ್ ಕಂಪನಿಗಳು ಹಾಗೂ ಆಟೋ ಚಾಲಕರ ಆಟಾಟೋಪಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ಹೆಚ್ಚಿಸಲಾಗಿರುವ ದರ:
ಕನಿಷ್ಠ ದರ ಮೊದಲ 2 ಕಿ.ಮೀ.ಗೆ – 36 ರೂ. (ಮೂವರು ಪ್ರಯಾಣಿಕರು).
ನಂತರದ ಪ್ರತಿ ಕಿ.ಮೀ.ಗೆ 18 ರೂ.
ಕಾಯುವಿಕೆ ದರ ಮೊದಲ ಐದು ನಿಮಿಷ – ಉಚಿತ
ಮೊದಲ ಐದು ನಿಮಿಷದ ನಂತರ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ 10 ರೂ.
ಆಟೋ ಪ್ರಯಾಣಿಕರ ಲಗೇಜು ದರ:
ಮೊದಲ 20 ಕೆಜಿಗೆ – ಉಚಿತ
20 ಕೆಜಿಯಿಂದ ನಂತರದ ಪ್ರತಿ 20 ಕೆಜಿಗೆ ಅಥವಾ ಅದರ ಭಾಗಕ್ಕೆ 10 ರೂ.
ಗರಿಷ್ಠ ಪ್ರಯಾಣಿಕರ ಲಗೇಜು: 50 ಕೆಜಿ
ರಾತ್ರಿ ವೇಳೆಯ ದರ:
ಸಾಮಾನ್ಯ ದರದ ಅರ್ಧ ಪಟ್ಟು ಹೆಚ್ಚು (ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆವರೆಗೆ) ಪಡೆಯಬಹುದು.
