- ವಕೀಲ್ ರಮೇಶ್ ನಾಯಕ್ ಅವರು ಸಲ್ಲಿಸಿದ್ದ ಪಿಐಎಲ್ ಅರ್ಜಿ
- ಬ್ಯಾಗ್‌ಗಳ ಹೊರೆಯಿಂದ ಮಕ್ಕಳಿಗೆ ಪಾಶ್ಚರಲ್ ಡೀವಿಯೇಷನ್ ಸಮಸ್ಯೆ
2023-24ರ ಶೈಕ್ಷಣಿಕ ವರ್ಷ ಇದೀಗ ಆರಂಭವಾಗಿದ್ದು, ಮಕ್ಕಳು ಶಾಲೆಗೆ ತೆರಳುತ್ತಿದ್ದಾರೆ. ಶಾಲಾ ಮಕ್ಕಳಿಗೆ ಬ್ಯಾಗ್ (ಪಾಟೀ ಚೀಲ) ಭಾರ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಮಕ್ಕಳ ಸರ್ವಾಂಗೀಣ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ವಕೀಲ ರಮೇಶ್ ನಾಯಕ್ ಹೇಳಿದ್ದರು. ಈ ಅರ್ಜಿ ವಿಚಾರಣೆಯನ್ನು ಸಿಜೆ ಪ್ರಸನ್ನ ಬಿ.ವರಾಳೆ, ನ್ಯಾ.ಎಂ.ಜಿ.ಎಸ್.ಕಮಲ್ ಅವರಿದ್ದ ಪೀಠ ನಡೆಸಿತು.
ವಕೀಲ ರಮೇಶ್ ನಾಯಕ್ ಅವರು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.
ಅರ್ಜಿದಾರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿರುವ ವಿಷಯ ಗಂಭೀರವಾಗಿದೆ. ಇದಕ್ಕೆ ಸಮರ್ಪಕವಾದ ಪೂರಕ ಅಂಶಗಳಿಲ್ಲ. ಇದು ಅರೆಬೆಂದ ಅರ್ಜಿ. ಹೊಸದಾಗಿ ಮತ್ತೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ತಿಳಿಸಿದೆ.
ಈಗ ಶಾಲೆಗೆ ತೆರಳುವ ಬಹುತೇಕ ಮಕ್ಕಳು ಭಾರವಾದ ಬ್ಯಾಗ್ ಅನ್ನು ಬೆನ್ನ ಮೇಲೆ ಹೊತ್ತು ನಡೆಯುತ್ತಾರೆ. ಈ ವೇಳೆ ಅವರು ನಡೆಯುವ ಭಂಗಿ ನೋಡಿದರೆ, ಮಕ್ಕಳ ಸಮಸ್ಯೆ ಏನೆಂದು ತಿಳಿಯುತ್ತದೆ. ಮಕ್ಕಳ ಸಾಮರ್ಥ್ಯಕ್ಕಿಂತ ಅತಿ ಹೆಚ್ಚಿನ ತೂಕದ ಬ್ಯಾಗ್ ಹೊರಿಸಲಾಗುತ್ತಿದೆ. ಈ ಬ್ಯಾಗ್‌ಗಳ ಹೊರೆಯಿಂದ ಮಕ್ಕಳಿಗೆ ಪಾಶ್ಚರಲ್ ಡೀವಿಯೇಷನ್ ಸಮಸ್ಯೆ ಕಾಡುತ್ತಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸೆಕ್ಯೂರಿಟಿ ಗಾರ್ಡ್‌ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಪರಾರಿಯಾದ ಪುಡಿ ರೌಡಿ
ಮಕ್ಕಳಿಗೆ ಆರೋಗ್ಯದ ಸಮಸ್ಯೆ ಕಾಡಬಾರದು ಎಂದು ಶಿಕ್ಷಣ ಇಲಾಖೆ ಬ್ಯಾಗ್ ಲೆಸ್ ಡೇ ಮಾಡಲು ಮುಂದಾಗಿತ್ತು. ಪ್ರತಿ ಶನಿವಾರ ಮಕ್ಕಳಿಗೆ ಬ್ಯಾಗ್ ಹೊರೆಯನ್ನು ಕಡಿಮೆ ಮಾಡಲು ಆ ದಿನ ಮಕ್ಕಳಿಗೆ ಶಾಲೆಗೆ ಬ್ಯಾಗ್ ತರುವ ಬದಲಾಗಿ, ಯೋಗ, ವ್ಯಾಯಾಮ ಚಟುವಟಿಕೆ ಮಾಡಿಸಲು ಇಲಾಖೆ ಸಲಹೆ ನೀಡಿದೆ. ಸದ್ಯ ಶಾಲೆಗಳಲ್ಲಿ ಕಲಿಕಾ ಚೇತರಿಕಾ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದ ಬಳಿಕ ಬ್ಯಾಗ್ ಲೆಸ್ ಡೇ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಈ ಹಿಂದೆ ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ತಿಳಿಸಿದ್ದರು.