ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಂಚಾರ ನಿಯಮ ಉಲ್ಲಂಘನೆ, ಅಪಘಾತಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮುಂದಾಗಿದೆ. ಪೊಲೀಸ್ ಇಲಾಖೆಯ ಪೊಲೀಸ್ ಟ್ರಾಫಿಕ್ ಕಮಾಂಡ್ ಸೆಂಟರ್ ಸಹಯೋಗದಲ್ಲಿ ತನ್ನ ಚಾಲನಾ ಸಿಬ್ಬಂದಿಗಳಿಗೆ ಡಿಸೆಂಬರ್ 30ರವರೆಗೆ ಸಂಚಾರ ನಿಯಮ ಪಾಲನೆ ತರಬೇತಿ ನಡೆಸುತ್ತಿದೆ. ಆದರೆ, ತರಬೇತಿ ನಡೆಯುವಾಗಲೇ ಬಿಎಂಟಿಸಿ ಬಸ್‌ನಿಂದಾಗಿ ಓರ್ವ ಗೃಹಿಣಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಸೀಮಾ (21) ಮೃತ ಗೃಹಿಣಿ. ಡಿ.13ರ ಸಾಯಂಕಾಲ 6.30ರ ಸುಮಾರಿಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿಯ ಮಡಿವಾಳ ಫ್ಲೈಓವರ್ ಮೇಲೆ ಈ ದುರ್ಘಟನೆ ನಡೆದಿದೆ.
ಡಿ.13ರ ಸಾಯಂಕಾಲ ಗೃಹಿಣಿ ಸೀಮಾ ಆಕೆಯ ಪತಿ ಗುರುಮೂರ್ತಿ ಹಾಗೂ ಎರಡು ವರ್ಷದ ಮಗು ಗಾನವಿ ಜತೆಗೆ ನಗರದಲ್ಲಿ ನಡೆಯುತ್ತಿರುವ ಪ್ರೊ ಕಬ್ಬಡಿ ವೀಕ್ಷಣೆ ಮಾಡಲು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ, ಅಜಾಗರೂಕತೆಯಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್ ತಿರುಗಿಸಿ ಡಿಕ್ಕಿ ಹೊಡೆದಿದೆ. ಪರಿಣಾಮ ಗೃಹಿಣಿ ಸೀಮಾ ಬಸ್‌ನ ಚಕ್ರದಡಿ ಸಿಲುಕಿದ್ದಾರೆ. ಹೆಲ್ಮೆಟ್ ಧರಿಸಿದ್ದರೂ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪತಿ ಮತ್ತು ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಬಸ್‌ನ ನಿರ್ವಾಹಕ ಮತ್ತು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಗೃಹಿಣಿ ಸೀಮಾ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೃತಳ ಪತಿ ಗುರುಮೂರ್ತಿ ಹಾಗೂ ಮೃತ ಗೃಹಿಣಿ ಸೀಮಾ ಮೂಲತಃ ವಿಜಯನಗರ ಜಿಲ್ಲೆ ಗುಡೇಕೋಟೆ ಕೂಡ್ಲಿಗಿಯ ಶ್ರೀಕಂಠಪುರ ತಾಂಡದ ನಿವಾಸಿಗಳು. ಗುರುಮೂರ್ತಿ ಬೆಸ್ಕಾಂನಲ್ಲಿ ಲೈನ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ದಂಪತಿ ಕೆಲಸದ ನಿಮಿತ್ತ ಬೆಂಗಳೂರಿನ ಸಿಂಗಸಂಧ್ರದಲ್ಲಿ ನೆಲೆಸಿದ್ದರು.
ಈ ಬಗ್ಗೆ ಮಾತನಾಡಿದ ಮೃತಳ ಪತಿ ಗುರುಮೂರ್ತಿ, “ವೇಗವಾಗಿ ಬಸ್ ತಿರುಗಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ನನ್ನ ಪತ್ನಿಯ ಸಾವಾದ ಬಳಿಕ ಬಸ್‌ನ ಚಾಲಕ, ನಿರ್ವಾಹಕ ಇಬ್ಬರು ಪರಾರಿಯಾಗಿದ್ದಾರೆ. ಈ ಘಟನೆ ಬಳಿಕ ಬಿಎಂಟಿಸಿ ಅಧಿಕಾರಿಗಳು ಯಾರು ಬಂದಿಲ್ಲ” ಎಂದು ಹೇಳಿದ್ದಾರೆ.
ನಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭ್ರೂಣ ಹತ್ಯೆ | ಆರೋಗ್ಯಾಧಿಕಾರಿಗಳ ತನಿಖೆ ವೇಳೆ ಹೊಸಕೋಟೆಯ ಆಸ್ಪತ್ರೆಯಲ್ಲಿ 16 ವಾರಗಳ ಭ್ರೂಣ ಪತ್ತೆ
ಯಮರೂಪಿ ಬಿಎಂಟಿಸಿಗೆ ಬಲಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಅಪಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. 2023ರ ಒಂದೇ ವರ್ಷದಲ್ಲಿ 35 ಜನರು ಬಿಎಂಟಿಸಿ ಬಸ್‌ಗೆ ಬಲಿಯಾಗಿದ್ದಾರೆ.
ಈ ವರ್ಷ(2023) ಬಿಎಂಟಿಸಿ ಬಸ್ ಅಪಘಾತದಿಂದ 35 ಜನ ಸಾವನ್ನಪ್ಪಿದ್ದು, 97 ಜನ ಅಪಘಾತದಲ್ಲಿ ಗಾಯಗೊಂಡಿದ್ದಾರೆ. 2020ರಲ್ಲಿ ಬಿಎಂಟಿಸಿ ಬಸ್‌ಗೆ 22 ಜನರು ಬಲಿಯಾಗಿದ್ದು, 49 ಜನರು ಗಾಯಗೊಂಡಿದ್ದಾರೆ. 2021ರಲ್ಲಿ 27 ಜನರು ಸಾವನ್ನಪ್ಪಿದ್ದರೆ, 58 ಜನರು ಗಾಯಗೊಂಡಿದ್ದಾರೆ. 2022ರಲ್ಲಿ 37 ಜನರು ಬಲಿಯಾಗಿದ್ದರೆ, 85 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.