ಯಶವಂತಪುರ-ನಾಯಂಡಹಳ್ಳಿಗೆ ತೆರಳುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗೆ ಕಾರ್ವೊಂದು ಡಿಕ್ಕಿ ಹೊಡೆದ ಪರಿಣಾಮ ಅಗ್ನಿ ಅವಘಡ ಸಂಭವಿಸಿದೆ.
ಈ ಘಟನೆ ಬೆಂಗಳೂರಿನ ನಾಗರಭಾವಿ ಹೊರವರ್ತುಲ ರಸ್ತೆಯ ಚಂದ್ರಾಲೇಔಟ್ ಬಸ್ ನಿಲ್ದಾಣದ ಬಳಿ ನಡೆದಿದೆ. ಸೋಮವಾರ ಬೆಳಗ್ಗೆ 9 ಗಂಟೆಗೆ ಈ ಘಟನೆ ನಡೆದಿದೆ.
ಬಿಎಂಟಿಸಿ ಬಸ್ ಯಶವಂತಪುರದಿಂದ ನಾಯಂಡಹಳ್ಳಿಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ನಾಗರಭಾವಿಯ ಹೊರವರ್ತುಲ ರಸ್ತೆಯ ಚಂದ್ರಾಲೇಔಟ್ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಿಸಲು ಸಿಬ್ಬಂದಿ ಬಸ್ ನಿಲ್ಲಿಸಿದ್ದಾರೆ.
ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಪೆಟ್ರೋಲ್ ಕಾರ್ ಬಸ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಉಂಟಾದ ಘರ್ಷಣೆಗೆ ಬೆಂಕಿ ಹತ್ತಿಕೊಂಡಿದ್ದು, ಕಾರು ಸಂಪೂರ್ಣವಾಗಿ ಅಗ್ನಿಗಾಹುತಿಯಾಯಿತು. ಕಾರಿನಿಂದ ಬಸ್ನ ಹಿಂಭಾಗ ಬೆಂಕಿ ಹೊತ್ತಿಕೊಳ್ಳಲು ಪ್ರಾರಂಭವಾಗಿತ್ತು. ಈ ವೇಳೆ, ಸಿಬ್ಬಂದಿ ಬಸ್ ಮತ್ತು ಕಾರ್ ಅನ್ನು ಬೇರ್ಪಡಿಸಲು ಪ್ರಯತ್ನಿಸಿದರು. ಬಳಿಕ ಸಾರ್ವಜನಿಕರು ಸಿಬ್ಬಂದಿ ಸೇರಿ ಬಸ್ಗೆ ತಗುಲಿದ ಬೆಂಕಿಯನ್ನು ನೀರು ಮತ್ತು ಅಗ್ನಿನಂದಕ ಬಳಸಿ ನಂದಿಸಿದರು. ಬಸ್ಸಿನ ಹಿಂಬದಿ ಆಸನಗಳು ಸುಟ್ಟು ಕರಕಲಾಗಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಭ್ರೂಣಲಿಂಗ ಹತ್ಯೆ ಪ್ರಕರಣ: ಮತ್ತೋರ್ವ ನರ್ಸ್ ಬಂಧನ
ಈ ವೇಳೆ, ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
“ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ನಮ್ಮ ಸಂಸ್ಥೆಯ ಚಾಲಕ ಕಾರ್ ಡ್ರೈವರ್ ಮತ್ತು ಅವರ ಕುಟುಂಬವನ್ನು ಕಾರಿನಿಂದ ಹೊರಗೆ ಕರೆತರಲು ಸಹಾಯ ಮಾಡಿದರು. ಬಸ್ನಲ್ಲಿದ್ದ ಸುಮಾರು 30 ಪ್ರಯಾಣಿಕರನ್ನು ಬಸ್ನಿಂದ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ನಂತರ ಕಾರಿನಲ್ಲಿ ಮತ್ತು ಬಸ್ನ ಹಿಂಬದಿಯಲ್ಲಿ ಬೆಂಕಿ ಹೊತ್ತಿಕೊಂಡಂತೆ, ನಮ್ಮ ಚಾಲಕ ಬಸ್ ಮತ್ತು ಕಾರ್ ಅನ್ನು ಬೇರ್ಪಡಿಸಲು ಪ್ರಯತ್ನಿಸಿದ್ದಾರೆ. ಚಾಲಕ ಮತ್ತು ನಿರ್ವಾಹಕರ ಸಮಯೋಚಿತ ಕಾರ್ಯವು ಹಲವರ ಜೀವವನ್ನು ಉಳಿಸಿದೆ” ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಜಿ. ಶ್ಲಾಘಿಸಿದ್ದಾರೆ.