ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಷ್ಟು ದಿನ ‘ಚಡ್ಡಿ ಗ್ಯಾಂಗ್’ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿತ್ತು. ಇದರ ಜತೆಗೆ ಇದೀಗ, ‘ಮಂಕಿ ಕ್ಯಾಪ್ ಗ್ಯಾಂಗ್’ ಬಂದು ಸೇರಿದೆ. ಆದರೆ, ಈ ಗ್ಯಾಂಗ್ ಮನೆಗಳಲ್ಲದೇ, ಮೆಡಿಕಲ್ ಸ್ಟೋರ್ಸ್, ಅಪೋಲೋ ಫಾರ್ಮಸಿಗಳಲ್ಲಿ ಕಳ್ಳತನ ಮಾಡುತ್ತಿದೆ.
ಕಳೆದ ಹದಿನೈದು ದಿನಗಳಲ್ಲಿ ಕೊತ್ತನೂರು, ಹೆಚ್ಎಸ್ಆರ್ ಲೇಔಟ್, ಮಾರತ್ತಹಳ್ಳಿಯ ಅಪೋಲೋ ಫಾರ್ಮಸಿಗಳಲ್ಲಿ ಕಳ್ಳತನ ನಡೆದಿದೆ.
ಈ ಮಂಕಿ ಕ್ಯಾಪ್ ಗ್ಯಾಂಗ್ ತಮ್ಮ ಮುಖವನ್ನು ಮಂಕಿ ಕ್ಯಾಪ್ ಮೂಲಕ ಮುಚ್ಚಿಕೊಂಡು ಔಷಧಿ ಖರೀದಿ ಮಾಡುವ ನೆಪದಲ್ಲಿ ಮೆಡಿಕಲ್ ಸ್ಟೋರ್‌ಗೆ ತೆರಳುತ್ತಾರೆ. ಬಳಿಕ ಒಂದು ವಸ್ತುವನ್ನು ಖರೀದಿ ಮಾಡಿ, ಹಣ ನೀಡುತ್ತಾರೆ. ಬಳಿಕ ಆ ವಸ್ತು ಬೇಡವೆಂದು ಹಣ ವಾಪಾಸ್ ಕೇಳುತ್ತಾರೆ. ಬಳಿಕ ಮೆಡಿಕಲ್ ಸಿಬ್ಬಂದಿ ಹಣ ನೀಡಲು ಗಲ್ಲಾಪೆಟ್ಟಿಗೆ ತೆರೆದಾಗ ಚಾಕು ತೋರಿಸಿ ರಾಬರಿ ಮಾಡಲು ಮುಂದಾಗುತ್ತಾರೆ. ಇದಕ್ಕೆ ನಿರಾಕರಿಸಿದ ಸಿಬ್ಬಂದಿಗೆ ಚಾಕವಿನಿಂದ ಇರಿದು ಪರಾರಿಯಾಗುತ್ತಾರೆ.
ಮಧ್ಯರಾತ್ರಿ ಮೆಡಿಕಲ್ ಅಂಗಡಿಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಲು ಮುಂದಾಗುತ್ತಾರೆ. ಈ ವೇಳೆ, ಸ್ಟೋರ್ ಬಳಿ ಯಾರಾದರೂ ಬರುತ್ತಿದ್ದಾರಾ? ಎಂದು ನೋಡಿಕೊಳ್ಳಲು ಹೊರಗಡೆ ಒಬ್ಬ ನಿಂತಿರುತ್ತಾನೆ. ಮತ್ತೊಬ್ಬ ಶೆಟರ್ಸ್ ಮುರಿದು ಅಂಗಡಿಯೊಳಗಿರುವ ಹಣವನ್ನು ಕದಿಯುತ್ತಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಾಯಿ, ಮಗನ ಬರ್ಬರ ಹತ್ಯೆ; ಆರೋಪಿ ಪತ್ತೆಗೆ ತಂಡ ರಚನೆ
ಮುಖವನ್ನು ಮಂಕಿ ಕ್ಯಾಪ್ನಲ್ಲಿ ಮುಚ್ಚಿಕೊಂಡು ಕೈಯಲ್ಲಿ ಕಬ್ಬಿಣದ ಸಲಾಕೆಗಳನ್ನು ಹಿಡಿದು ಬರುವ ಖದೀಮರು ಮೆಡಿಕಲ್ ಸ್ಟೋರ್ಗಳ ಶೆಟರ್ಸ್ ಮುರಿದು ಕಳ್ಳತನ ಮಾಡುತ್ತಿದ್ದಾರೆ. ಈ ಘಟನೆಗಳು ಹೆಚ್ಚಾಗಿ ನಗರದ ವಿಜಯನಗರದ ಸುತ್ತಮುತ್ತ ಮರುಕಳಿಸುತ್ತಿವೆ.
ಕಳೆದ ಆಗಸ್ಟ್ 31 ರಂದು ಮಧ್ಯರಾತ್ರಿ ವಿಜಯನಗರದ ಮೆಡಿಕಲ್ ಸ್ಟೋರ್ ಒಂದಕ್ಕೆ ಖದೀಮರು ನುಗ್ಗಿದ್ದರು. ಬಳಿಕ, ಅಂಗಡಿ ಸಿಬ್ಬಂದಿ ಇರುವುದನ್ನು ನೋಡಿ ಸ್ಥಳದಿಂದ ಪರಾರಿಯಾಗಿದ್ದರು. ಕಳ್ಳರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಕುರಿತು ಮಾರತ್ತಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಕೊತ್ತನೂರು ಹಾಗೂ ಗೋವಿಂದರಾಜನಗರ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.