ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಎಚ್‌ಎಎಲ್ ನಿವಾಸಿ ವಿವೇಕ್ ಕುಮಾರ್ ಮೃತ ದುರ್ದೈವಿ. ತಮ್ಮ ಆತ್ಮಹತ್ಯೆಗೆ ಕಾರಣವೇನೆಂದು ವಿವರಿಸಿ ವಿಡಿಯೋ ಮಾಡಿರುವ ವಿವೇಕ್, ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಬಳಿಕ, ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಅವರು ಲೈಫ್ ಸ್ಟೈಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಅವರಿಗೆ ಕೆಲಸದ ಸಮಯದಲ್ಲಿ ಮುವರು ಹಿರಿಯ ಅಧಿಕಾರಿಗಳು ಅವರ ಜಾತಿಯನ್ನು ಉಲ್ಲೇಖಿಸಿ, ಪದೇ ಪದೇ ಕಿರುಕುಳ ನೀಡುತ್ತಿದ್ದರು. ಆ ಬಗ್ಗೆ ಮೂವರನ ವಿರುದ್ಧವೂ ಕಚೇರಿಯ ಆಡಳಿತಕ್ಕೆ ವಿವೇಕ್ ದೂರು ನೀಡಿದ್ದರು. ಆದರೆ, ದೂರು ನೀಡಿದ ಕೆಲವೇ ಗಂಟೆಗಳಲ್ಲಿ ವಿವೇಕ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ನಾನು ಕೆಳಜಾತಿಯವನು ಎಂಬ ಕಾರಣಕ್ಕೆ ಸಹೋದ್ಯೋಗಿಗಳಾದ ಮಾಲತಿ ಎಸ್ ಮತ್ತು ನಿತೀಶ್ ಕುಮಾರ್ ನನಗೆ ಕಿರುಕುಳ ನೀಡುತ್ತಿದ್ದಾರೆ. ಕಂಪನಿಯ ಎಚ್‌ಆರ್ ಕುಮಾರ್ ಸೂರಜ್ ಅವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೇಲಧಿಕಾರಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆಯ ಹಾದಿ ಹಿಡಿದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ವಿವೇಕ್ ತಂದೆ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಕಂಪನಿಯ ವ್ಯವಸ್ಥಾಪಕಿ ಮಾಲತಿ ಮತ್ತು ಸಹೋದ್ಯೋಗಿಗಳಾದ ಕುಮಾರ್ ಸೂರಜ್ ಮತ್ತು ನಿತೇಶ್ ಕುಮಾರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಎಫ್ಐಆರ್ ಪ್ರಕಾರ, ವಿವೇಕ್ ಹಲವಾರು ತಿಂಗಳುಗಳಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರು. ಅವರ ಮೇಲೆ ಸಹೋದ್ಯೋಗಿಗಳು ಜಾತಿ ಆಧಾರಿತ ನಿಂದನೆ ಮಾಡಿದ್ದರು. ಕಚೇರಿಯಲ್ಲಿನ ಹಿರಿಯ ಅಧಿಕಾರಿಗಳ ಬಳಿ ತಮ್ಮ ಅಳಲನ್ನು ತೋಡಿಕೊಂಡರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿತೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.