- ರಾತ್ರಿ ಹೋಟೆಲ್ ತೆರೆಯುವುದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿ
- ಸಂಘದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಉಪಮುಖ್ಯಮಂತ್ರಿ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ದಿನದ 24 ಗಂಟೆಯು ಹೋಟೆಲ್ ವ್ಯವಹಾರ ನಡೆಸಲು ಅನುಮತಿ ನೀಡಬೇಕೆಂದು ಬೃಹತ್ ಬೆಂಗಳೂರು ಹೋಟೆಲ್ ಸಂಘ (ಬಿಬಿಎಚ್‌ಎ) ಸರ್ಕಾರಕ್ಕೆ ಒತ್ತಾಯಿಸಿದೆ.
ಜೂನ್ 22ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ ರಾವ್ ನೇತೃತ್ವದ ನಿಯೋಗವು ಮನವಿಯನ್ನು ಸಲ್ಲಿಸಿದೆ.
ಈ ಬಗ್ಗೆ ಮಾತನಾಡಿದ ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ ರಾವ್, “ಹೋಟೆಲ್ ವಲಯವನ್ನು ಕೈಗಾರಿಕೆ ಎಂದು ಮಾನ್ಯ ಮಾಡಬೇಕು. ಉದ್ಯಮಕ್ಕೆ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿ ಮಾಡಬೇಕು ಎಂಬ ಬೇಡಿಕೆ ಈಡೇರಿಸುವುದರೊಂದಿಗೆ ಹೊಸ ಸರ್ಕಾರವು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ಒತ್ತಾಯಿಸಲಾಗಿದೆ. ಸಂಘದ ಮನವಿಗೆ ಉಪಮುಖ್ಯಮಂತ್ರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ” ಎಂದರು.
“ದಿನದ 24 ಗಂಟೆಯೂ ಹೋಟೆಲ್ ತೆರೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಇದೆ. ಆದರೆ, ಪೋಲಿಸ್ ಇಲಾಖೆ ಅವಕಾಶ ನೀಡುತ್ತಿಲ್ಲ. ರಾತ್ರಿ 1 ಗಂಟೆಯವರೆಗೆ ಮಾತ್ರ ಹೋಟೆಲ್ ತೆರೆಯಲು ಪೋಲಿಸ್ ಇಲಾಖೆ ಅವಕಾಶ ನೀಡಿದೆ. ಕೇರಳ, ದೆಹಲಿ, ತಮಿಳುನಾಡು, ಗುಜರಾತ್ ಮಾದರಿಯಲ್ಲಿ 24 ಗಂಟೆಯೂ ಹೋಟೆಲ್ ತೆರೆಯಲು ಅವಕಾಶ ನೀಡಬೇಕು” ಎಂದರು.
“ರಾಜಧಾನಿಯಲ್ಲಿ ಹಲವು ಜನ ಶಿಫ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಾರೆ. ಹಲವು ಜನರಿಗೆ ರಾತ್ರಿಯ ಆಹಾರದ ಅಗತ್ಯವಿದೆ. ಹೋಟೆಲ್‌ಗಳಲ್ಲಿ ಕುಡಿಯುವ ನೀರು, ಶೌಚಾಲಯ ಉಚಿತವಾಗಿ ಪೂರೈಸುತ್ತೇವೆ. ರಾತ್ರಿ ಹೋಟೆಲ್ ತೆರೆಯುವುದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ನೀಡಿದಂತಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಡೇ ಕೇರ್ ಸೆಂಟರ್ | ಚಿಕ್ಕ ಮಗು ಮೇಲೆ ಪದೇ ಪದೆ ಹಲ್ಲೆ ನಡೆಸಿದ ದೊಡ್ಡ ಮಗು
“ಹೋಟೆಲ್ ಸಂಘದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಶೀಘ್ರದಲ್ಲೇ ಸಭೆ ಕರೆಯುವುದಾಗಿ ಹೇಳಿದ್ದಾರೆ” ಎಂದರು ಪಿ.ಸಿ.ರಾವ್ ತಿಳಿಸಿದರು.
ನಿಯೋಗದಲ್ಲಿ ಸಂಘದ ಕಾರ್ಯದರ್ಶಿ ವಿರೇಂದ್ರ ಕಾಮತ್, ಸಂತೋಷ್ ಪೈ ಉಪಸ್ಥಿತರಿದ್ದರು.