ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಇದೀಗ ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಭಾಸ್ಕರ್ ಬಂಧಿತ ಆರೋಪಿ. ಈತ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ವಡ್ಡಹಳ್ಳಿ ಗ್ರಾಮದವನು. ಬಿ.ಕಾಂ ಪದವೀಧರನಾದ ಈತ ಬಾಂಬ್ ಬೆದರಿಕೆ ಕರೆ ಮಾಡಿ ಬಂಧನ ಭೀತಿಯಿಂದ ಆಂಧ್ರಪ್ರದೇಶದ ಚಿತ್ತೂರಿಗೆ ಪರಾರಿಯಾಗಿದ್ದನು. ಆತನ ಮೊಬೈಲ್ ಕರೆಗಳ ಜಾಡು ಹಿಡಿದ ಪೊಲೀಸರು ಆತನನ್ನು ಚಿತ್ತೂರಿನಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.
ಪೊಲೀಸರು ಈತನನ್ನು ಬಂಧಿಸಿ, ವಿಚಾರಣೆ ನಡೆಸುವ ವೇಳೆ ಈತ ಆಘಾತಕಾರಿ ವಿಷಯವೊಂದನ್ನು ಹೇಳಿಕೊಂಡಿದ್ದಾನೆ. ಏನೆಂದರೆ, ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಮೇಲ್ ಬಂದಿದ್ದು ಹಾಗೂ ಪೊಲೀಸರು ತೀವ್ರ ತನಿಖೆ ನಡೆಸುತ್ತಿರುವ ಸುದ್ದಿ ತಿಳಿದಿದ್ದ ಈತ ವೈಯಕ್ತಿಕ ಕೆಲಸದ ನಿಮಿತ್ತ ಸೋಮವಾರ ಬಸ್ನಲ್ಲಿ ಬೆಂಗಳೂರಿಗೆ ಬಂದಿದ್ದನು. ಕಾರ್ಪೊರೇಷನ್ ವೃತ್ತದಲ್ಲಿ ಇಳಿದು ರಾಜಭವನದತ್ತ ನಡೆದುಕೊಂಡು ಹೋಗಿದ್ದನು.
ಈ ವೇಳೆ, ಬೆಂಗಳೂರು ಪೊಲೀಸರನ್ನು ಆಟವಾಡಿಸಬೇಕೆಂದು ನಿರ್ಧಾರ ಮಾಡಿ, ಗೂಗಲ್‌ನಲ್ಲಿ ಎನ್‌ಐಎ ನಂಬರ್ ಸರ್ಚ್ ಮಾಡಿ ಪಡೆದುಕೊಂಡಿದ್ದಾನೆ.
ಅಜ್ಞಾತ ಸ್ಥಳದಿಂದ ಸೋಮವಾರ ರಾತ್ರಿ 11.30ರ ಸುಮಾರಿಗೆ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ದೊಮ್ಮಲೂರಿನ ನಿಯಂತ್ರಣ ಕೊಠಡಿಗೆ ಕರೆ ಮಾಡಿ ‘ರಾಜಭವನದಲ್ಲಿ ಬಾಂಬ್ ಇಟ್ಟಿದ್ದೇವೆ. ಕೆಲವೇ ಕ್ಷಣದಲ್ಲಿ ಅದು ಸ್ಫೋಟಗೊಳ್ಳಲಿದೆ’ ಎಂದು ಬೆದರಿಕೆ ಹಾಕಿದ್ದಾನೆ. ಬೆದರಿಕೆ ಕರೆಯಿಂದ ಗಾಬರಿಯಾದ ಎನ್ಐಎ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ 12 ಗಂಟೆ ಸುಮಾರಿಗೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿ ರಾಜಭವನದ ಸುತ್ತಮುತ್ತ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ದೊರೆತಿಲ್ಲ. ಹೀಗಾಗಿ, ಇದೊಂದು ಹುಸಿ ಬಾಂಬ್ ಕರೆ ಎಂಬುದು ತಿಳಿದುಬಂದಿತ್ತು.
ಈ ಸುದ್ದಿ ಓದಿದ್ದೀರಾ? ಡಿಸೆಂಬರ್ 14 ರಿಂದ 22 ರವರೆಗೆ ಬೆಂಗಳೂರು-ಮಂಗಳೂರು ರೈಲು ಸಂಚಾರ ರದ್ದು
ಬೆಂಗಳೂರಿನಿಂದ ಆಂಧ್ರದ ಚಿತ್ತೂರಿನ ದೇವಸ್ಥಾನವೊಂದಕ್ಕೆ ತೆರಳಿದ್ದ ಆರೋಪಿಯ ಫೋನ್ ನಂಬರ್ ನೆಟ್ವರ್ಕ್ ಟ್ರ್ಯಾಕ್ ಮಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.