ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಬಿದ್ದು, ಎಂಟು ಮಂದಿ ಸಾವನ್ನಪ್ಪಿದ್ದಾರೆ. ಅವಘಡಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ವಿನಯ್ ಅವರನ್ನು ಅಮಾನತು ಮಾಡಲಾಗಿದೆ. ಕಟ್ಟಡದ ಮಾಲೀಕನಿಗೆ ಮೂರು ಬಾರಿ ನೋಟಿಸ್ ನೀಡಿದ್ದರೂ, ಆತ ನಿರ್ಮಾಣ ಮುಂದುವರೆಸಿದ್ದರು. ಆತನ ವಿರುದ್ಧ ಕ್ರಮ ಕೈಗೊಳ್ಳದೆ ಎಇಇ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೊಪಿಸಲಾಗಿದೆ.
ಕಟ್ಟಡದ ಮಾಲೀಕ ಮುನಿರಾಜ್ ರೆಡ್ಡಿ ಅವರು ನಿರ್ಮಾಣ ಕಾಮಗಾರಿಗೆ ಅನುಮತಿ ಪಡೆದಿದ್ದ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಅನಧಿಕೃವಾಗಿ ನಿರ್ಮಾಣ ಮಾಡುವುದನ್ನು ನಿಲ್ಲಿಸುವಂತೆ ಮಾಲೀಕನಿಗೆ ಮೂರು ಬಾರಿ ನೋಟಿಸ್ ನೀಡಲಾಗಿತ್ತು. ಆದರೂ, ಮಾಲೀಕ ನೋಟಿಸ್‌ಅನ್ನು ನಿರ್ಲಕ್ಷಿಸಿ, ನಿರ್ಮಾಣ ಮುಂದುವರೆಸಿದ್ದರು. ಆತನ ವಿರುದ್ಧ ಎಇಇ ವಿಜಯ್ ಕ್ರಮಕೈಗೊಂಡಿಲ್ಲ ಕಾರಣಕ್ಕೆ ಅಮಾನತು ಮಾಡಲಾಗಿದೆ.
ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಆದರೆ, ಮಾಲೀಕ ಮುನಿರಾಜು ರೆಡ್ಡಿ ಆದೇಶವನ್ನು ನಿರ್ಲಕ್ಷಿಸಿದ್ದರು. ಮಾತ್ರವಲ್ಲದೆ, ಮತ್ತೊಂದು ಮಹಡಿಯನ್ನು ಸೇರಿಸಿದ್ದರು. ಆದರೂ, ಬಿಬಿಎಂಪಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ದುರ್ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.