ರಾಜ್ಯ ರಾಜಧಾನಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನ.17 ರಿಂದ ನ.20 ರವರೆಗೆ ಕೃಷಿ ಮೇಳ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೇಳ ಉದ್ಘಾಟನೆ ಮಾಡಿದರು. ಜತೆಗೆ, ಮಣ್ಣು ಪರೀಕ್ಷಿಸುವ ಹೊಸ ಆಪ್‌ಗೆ ಚಾಲನೆ ನೀಡಿದರು. 10ಕ್ಕೂ ಹೆಚ್ಚು ಜಿಲ್ಲೆಗಳ ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕೃಷಿ ಮೇಳ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಮುಖ್ಯಮಂತ್ರಿಯವರು ಬೆಳೆ ಪ್ರಾತ್ಯಕ್ಷಿಕೆ ತಾಕುಗಳು ಹಾಗೂ ವಸ್ತು ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದರು ಹಾಗೂ ರೈತರೊಂದಿಗೆ ಮಾತುಕತೆ ನಡೆಸಿದರು.
ಕೃಷಿ ಮೇಳ ಉದ್ಘಾಟನೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, “ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ಕೃಷಿ ವಿಶ್ವವಿದ್ಯಾಲಯ. ಪ್ರತಿ ವರ್ಷ ಈ ಕೃಷಿ ಮೇಳವನ್ನು ಏರ್ಪಾಡು ಮಾಡಲಾಗುತ್ತಿದೆ. ರಾಜ್ಯದ ರೈತರಿಗೆ ಕೃಷಿಯಲ್ಲಿ ಆಗಿರುವ ಆವಿಷ್ಕಾರ ಮತ್ತು ಬೆಳವಣಿಗೆಯನ್ನು ರೈತರಿಗೆ ತಿಳಿಸುವಂತಹ ಕಾರ್ಯ ಮಾಡಲಾಗುತ್ತಿದೆ. ವಿಶೇಷವಾಗಿ ಕೃಷಿಕರಿಗೆ ಹೊಸ ತಳಿಗಳು, ತಂತ್ರಜ್ಞಾನ ಬೆಳವಣಿಗೆ, ಗೋವಿನ ಸಂರಕ್ಷಣೆ, ಭೂಮಿ ಫಲವತ್ತತೆ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ” ಎಂದರು.
“ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಪದವಿ ನೀಡುವುದರ ಜತೆಗೆ ಹೆಚ್ಚು ಹೆಚ್ಚು ಸಂಶೋಧನೆಗೆ ಒತ್ತು ಕೊಡಬೇಕು. ಇಡೀ ದೇಶದಲ್ಲಿ ರಾಜಸ್ಥಾನ ಬಿಟ್ಟರೇ, ಹೆಚ್ಚು ಒಣ ಭೂಮಿ ಇರುವ ಪ್ರದೇಶ ನಮ್ಮದು. ಹೆಚ್ಚು ಜನ ರೈತರು ಕೃಷಿಯ ಮೇಲೆ ಅವಲಂಬನೆ ಆಗಿದ್ದಾರೆ. ಕೃಷಿ ಲಾಭದಾಯಕ ಆಗದೇ ಇದ್ದರೇ ಹಲವು ಜನ ಕೃಷಿ ಬಿಡುವಂತಹ ಪರಿಸ್ಥಿತಿ ಎದುರಾಗುತ್ತದೆ. ಹಲವು ಯುವಕರು ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ” ಎಂದು ತಿಳಿಸಿದರು.
“ಇದೀಗ ಐದು ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ತಳಿಗಳು ಹೇಗೆ ಇರಬೇಕೆಂದರೆ, ಮಳೆ ಮತ್ತು ನೀರು ಕಡಿಮೆ ಆದಾಗಲೂ ಕೂಡ ಬೆಳವಣಿಗೆ ಆಗಲು ಸಹಕಾರಿಯಾಗಬೇಕು. ಹವಾಮಾನ ವೈಪರೀತ್ಯದಿಂದಾಗಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಾಜ್ಯದಲ್ಲಿ ನಾಲ್ಕು ಮತ್ತು ಐದು ವರ್ಷಕ್ಕೊಮ್ಮೆ ಬರಗಾಲ ಬರುತ್ತದೆ. ಈ ವರ್ಷ ಭೀಕರ ಬರಗಾಲ ಬಂದಿದೆ. 336 ತಾಲೂಕುಗಳಲಲ್ಲಿ ಸುಮಾರು 223 ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಲಾಗಿದೆ” ಎಂದು ಹೇಳಿದರು.
“ಸರ್ಕಾರ ರೈತರಿಗೆ ಸಬ್ಸಿಡಿ ಕೊಡಬಹುದು. ನೀರು ಕೊಡಬಹುದು. ಆದರೆ, ಅವರಿಗೆ ಬೆಳೆ ನಷ್ಟ ತುಂಬಿಕೊಡಲು ಸಾಧ್ಯವಾಗಲ್ಲ. ಒಂದು ಲೆಕ್ಕದ ಪ್ರಕಾರ 33 ಸಾವಿರ ಕೋಟಿ ರೂಪಾಯಿ ಬೆಳೆ ನಷ್ಟವಾಗಿದೆ. 13,900 ಕೋಟಿ ರೂಪಾಯಿ ಮಾತ್ರ ಪರಿಹಾರ ಕೇಳಲು ಸಾಧ್ಯ. ರೈತರಿಗೆ 16 ಸಾವಿರ ಕೋಟಿ ಬೆಳೆ ನಷ್ಟವಾಗುತ್ತೆ. ಬರಗಾಲದ ಸಮಯದಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಮಹತ್ತರವಾದ ಪಾತ್ರ ವಹಿಸಬೇಕು. ಒಂದು ಹಸಿರು ಕ್ರಾಂತಿ ಒಮ್ಮೆ ಆದರೆ ಸಾಲದು, ಹಸಿರು ಕ್ರಾಂತಿ ನಿರಂತರವಾಗಿ ಆಗುತ್ತಿರಬೇಕು. ಇದು ಆಗಬೇಕಾದರೆ, ಹೊಸ ತಳಿಗಳು, ಹೊಸ ಔಷಧಿಗಳು, ಆಹಾರ ಸಂಗ್ರಹಣೆ, ಮಣ್ಣಿನ ಫಲವತ್ತತೆ, ಹೊಸ ತಂತ್ರಜ್ಞಾನ, ರೈತರ ಬೆಳೆಗೆ ನ್ಯಾಯವಾದ ಬೆಲೆ ನೀಡುವುದು ಇವೆಲ್ಲವನ್ನೂ ಮಾಡಿದಾಗಲೇ ಮಾತ್ರ ಸುಸ್ಥಿರವಾದ ಕೃಷಿ ಬೆಳವಣಿಗೆ ಮಾಡಬೇಕು” ಎಂದು ಹೇಳಿದರು.
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಕೃಷಿ ಮೇಳ ನಡೆಯುತ್ತಿದೆ. ಜತೆಗೆ ಕೃಷಿ ವಿವಿ ಗುರುತಿಸಿ ಅಭಿವೃದ್ಧಿಪಡಿಸಿರುವ ಕೆಂಪು ತೊಳೆಗಳಿರುವ ‘ಜಿಕೆವಿಕೆ ಕೆಂಪು ಹಲಸು’ ತಳಿಯನ್ನು ಕೃಷಿ ಮೇಳದಲ್ಲಿ ಬಿಡುಗಡೆ ಮಾಡಲಾಯಿತು.
ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ 5 ಹೊಸ ತಳಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ಸಾಮೆ– ಜಿಪಿಯುಎಲ್ 11, ಬರಗು–ಜಿಪಿಯುಪಿ 32, ರಾಗಿ– ಎಂ.ಎಲ್ 22, ಸೂರ್ಯಕಾಂತಿ ಕೆಬಿಎಸ್‌ಎಚ್–85 ಹಾಗೂ ಕೆಂಪು ಹಲಸು ತಳಿಗಳು ಕೃಷಿ ಮೇಳದಲ್ಲಿ ಬಿಡುಗಡೆಯಾದವು.
ಬರಗಾಲದ ಬೆಳೆಗಳ ಬಗ್ಗೆ ಮಾಹಿತಿ
ಕೃಷಿ ಮೇಳದಲ್ಲಿ ಬರಗಾಲದಲ್ಲಿ ರೈತರು ಬೆಳೆಯಬಹುದಾದ ವಿಶೇಷ ಬೆಳೆಗಳ ಬಗ್ಗೆ ಮಾಹಿತಿ ಸಿಗಲಿದೆ. ಜತೆಗೆ, ಬಾಡಲ್ ಬದನೆ, ಚೆರಿ ಟೊಮೆಟೊ ತರಕಾರಿಗಳು ಮತ್ತು ಆಲಂಕಾರಿಕ ಸೂರ್ಯಕಾಂತಿ ಹೂವಿನ ಪ್ರಾತ್ಯಕ್ಷಿಕೆಗಳ ಪ್ರದರ್ಶನ ಈ ಬಾರಿಯ ವಿಶೇಷವಾಗಿದೆ.
ಇನ್ನು ಮೇಳದಲ್ಲಿ ಮೊದಲ ಬಾರಿಗೆ ‘ಬೀಜ ಸಂತೆ’ ಆಯೋಜಿಸಲಾಗಿದೆ. ಈವರೆಗೆ ಮೇಳದಲ್ಲಿ ಐಐಎಚ್‌ಆರ್, ಕರ್ನಾಟಕ ರಾಜ್ಯ ಬೀಜ ನಿಗಮ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಬಿತ್ತನೆ ಬೀಜಗಳನ್ನು ಪ್ರದರ್ಶನಕ್ಕಷ್ಟೇ ಇಡುತ್ತಿದ್ದವು. ಆದರೆ, ಈ ಬಾರಿ ಪ್ರದರ್ಶನದ ಜತೆಗೆ ಬಿತ್ತನೆ ಬೀಜಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.
ಸಿರಿ ಧಾನ್ಯಗಳ ಬಳಕೆ ಪ್ರಮಾಣವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಈ ಬಾರಿ ‘ಸಿರಿಧಾನ್ಯಗಳ ಆಹಾರ ಮೇಳ’ವನ್ನು ಕೃಷಿ ಮೇಳದಲ್ಲಿ ಆಯೋಜನೆ ಮಾಡಲಾಗಿದೆ. ಈ ಕೃಷಿ ಮೇಳದಲ್ಲಿ ಬರೋಬ್ಬರಿ 625 ಮಳಿಗೆಗಳಿವೆ. ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗಿದೆ.
ಉತ್ತಮ ಸಾಧನೆ ಮಾಡಿದ ಐವರು ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಮಟ್ಟದ ‘ಕೃಷಿ ಪ್ರಶಸ್ತಿ’ಗಳನ್ನು ಪ್ರದಾನ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜ್ಯುವೆಲರಿ ಶಾಪ್ ಮಾಲೀಕರ ಮನೆಯಲ್ಲಿ ಆಭರಣ ಮತ್ತು ಲಕ್ಷಾಂತರ ರೂ. ಕದ್ದ ಕೆಲಸಗಾರ
- ‘ಎಚ್.ಡಿ.ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ’ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀಡಿಗಾನಹಳ್ಳಿಯ ಬಿ.ಆರ್. ಮಂಜುನಾಥ
- ‘ಎಂ.ಎಚ್.ಮರೀಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ’ಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊಸಹಳ್ಳಿಯ ಎಚ್.ಟಿ. ರಾಜೇಂದ್ರ
- ‘ಕ್ಯಾನ್ ಬ್ಯಾಂಕ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ’ಗೆ ರಾಮನಗರ ಜಿಲ್ಲೆಯ ಬಿಳಗುಂಬದ ಬಿ.ಪಿ. ವಾಸು
- ‘ಕ್ಯಾನ್ ಬ್ಯಾಂಕ್ ರಾಜ್ಯಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ’ಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗುಂಡಮನತ್ತದ ಎ.ವಿ. ರತ್ನಮ್ಮ
- ‘ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ’ಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಳದರೆಯ ಬಿ.ಜಿ. ಮಂಜೇಗೌಡ
ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ, ಶಾಸಕ ಶರತ್ ಬಚ್ಚೇಗೌಡ, ಕೃಷಿ ವಿವಿ ಕುಲಪತಿ ಡಾ. ಎನ್. ವಿ. ಸುರೇಶ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.