ಬೆಂಗಳೂರಿನ ಅತಿ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಒಂದಾದ, ವ್ಯಾಪಾರ ಚಟುವಟಿಕೆ ತಾಣವಾಗಿರುವ ಚಿಕ್ಕಪೇಟೆಯಲ್ಲಿ ರಾಶಿ ರಾಶಿ ಕಸ ಬಿದ್ದಿದೆ. ಚಿಕ್ಕಪೇಟೆಯ ಮುಖ್ಯರಸ್ತೆಯು ಕಸ ಹಾಕುವ ‘ಡಂಪಿಂಗ್ ಯಾರ್ಡ್’ಆಗಿ ಬದಲಾಗಿದೆ.
ಚಿಕ್ಕಪೇಟೆ ಮುಖ್ಯರಸ್ತೆಯನ್ನು ದುರಸ್ತಿ ಮಾಡಲು, ಒಂದು ಬದಿಯ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಸುಮಾರು ಮೂರು ತಿಂಗಳೇ ಕಳೆದಿವೆ. ರಸ್ತೆಯನ್ನು ಕಿತ್ತು, ಸಮತಟ್ಟು ಮಾಡಲಾಗಿದೆ. ಈ ನಡುವೆ ಕಾಮಗಾರಿ ಸ್ಥಗಿತಗೊಂಡಿದ್ದು, ಕೆಲಸಗಳು ನಡೆಯುತ್ತಿಲ್ಲ.
ಇದೇ ಸಮಯದಲ್ಲಿ ಮಳೆಯೂ ಸುರಿಯುತ್ತಿದ್ದು, ವ್ಯಾಪಾರಿಗಳಿಗೆ ರಸ್ತೆಯೇ ಕಸದ ಸುರಿಯುವ ತಾಣವಾಗಿದೆ. ಹಲವಾರು ದಿನಗಳಿಂದ ರಸ್ತೆಯಲ್ಲಿ ಕಸ ಸುರಿಯಲಾಗಿದ್ದು, ಈಗ ರಸ್ತೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಮಳೆನೀರಿನಲ್ಲಿ ತ್ಯಾಜ್ಯ ಕೊಳೆದು ವಾಸನೆ ಹರಡಲಾರಂಭಿಸಿದ. ಜೊತೆಗೆ, ಸೊಳ್ಳೆಗಳ ಹಾವಳಿಯೂ ಹೆಚ್ಚುತ್ತಿದೆ.
ಈಗಾಗಲೇ, ಡೆಂಗ್ಯೂ ಜ್ವರದ ಹಾವಳಿ ಬೆಂಗಳೂರಿನಲ್ಲಿ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಇಂತಹ ಸಮಯದಲ್ಲಿ ಹೆಚ್ಚು ಜನರು ಓಡಾಡುವ ಸ್ಥಳದಲ್ಲಿ ರಾಶಿ-ರಾಶಿ ಕಸ ಬಿದ್ದಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ.
ಚಿಕ್ಕಪೇಟೆಯಲ್ಲಿ ಕಸದ ರಾಶಿ ಬಿದ್ದಿರುವ ವಿಡಿಯೋವನ್ನು ಆಮ್ ಆದ್ಮಿ ಪಕ್ಷ (ಎಎಪಿ) ಹಂಚಿಕೊಂಡಿದೆ. “ಬೆಂಗಳೂರಿನ ಜನನಿಬಿಡ ಪ್ರದೇಶವಾದ ಚಿಕ್ಕಪೇಟೆಯಲ್ಲಿ ಕಸದ ರಾಶಿ ಹೀಗೆ ರಸ್ತೆ ಮೇಲೆ ಹರಡಿರುವುದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಬಿಬಿಎಂಪಿಗೆ ಧನ್ಯವಾದಗಳು. ಮಾನ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಚಿಕ್ಕಪೇಟೆ ಖಾಯಿಲೆಗಳ ಗೂಡಾಗುವುದರಲ್ಲಿದೆ, ಬಿಜೆಪಿ ಎಂಎಲ್‌ಎ ಉದಯ್ ಗರುಡಾಚಾರ್ ಅವರೇ ಮನೆ ಬಿಟ್ಟು ಹೊರಗೆ ಬನ್ನಿ ಇನ್ನಾದರು ಕಾರ್ಯಪ್ರವೃತ್ತರಾಗಿ” ಎಂದು ಆಕ್ರೋಶ ವ್ಯಕ್ತಪಡಿಸಿದೆ.