ರಾಜ್ಯದಲ್ಲಿ ದಸರಾ ಸಂಭ್ರಮ ಮುಗಿದಿದೆ. ನವರಾತ್ರಿ ಪೂಜೆಗಳು, ಸಡಗರ ಎಲ್ಲವೂ ಕೊನೆಗೊಂಡಿವೆ. ಆದರೆ, ಹಬ್ಬದಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಂಗ್ರಹ ಹೆಚ್ಚಾಗಿದ್ದು, ಹಬ್ಬ ಕಳೆದು ಮೂರು ದಿನವಾದರೂ ಕಸ ಸಂಗ್ರಹಣೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಮಹಾದಶಮಿ, ವಿಜಯ ದಶಮಿ ನಡೆದ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಬೆಂಗಳೂರಿನಲ್ಲಿ ಬರೋಬ್ಬರಿ 1,400 ಮೆಟ್ರಿಕ್ ಟನ್ ಹೆಚ್ಚುವರಿ ತ್ಯಾಜ್ಯ ಸಂಗ್ರಹವಾಗಿದೆ ಎಂದು ಬಿಬಿಎಂಪಿ ಹೇಳಿದೆ.
ಬಿಬಿಎಂಪಿ ವ್ಯಾಪ್ತಿಯ ಎಲ್ಲ ಎಂಟು ವಲಯಗಳಿಂದ ಶನಿವಾರ ಒಂದೇ ದಿನ 6,306 ಮೆಟ್ರಿಕ್ ಟನ್ (ಎಂಟಿ) ತ್ಯಾಜ್ಯ ಸಂಗ್ರಹವಾಗಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ದಿನನಿತ್ಯ ಸರಿಸುಮಾರು 4,900 ಮೆಟ್ರಿಕ್ ಟನ್ ಸಂಗ್ರಹವಾಗುತ್ತದೆ.
“ದಸರಾ ಹಬ್ಬ ಮತ್ತು ಆಯುಧ ಪೂಜೆಗಾಗಿ ಎಲ್ಲ ಮಾರುಕಟ್ಟೆಗಳು ಮತ್ತು ರಸ್ತೆಬದಿಗಳಲ್ಲಿ ಬಾಳೆ ಕಂದು, ಕುಂಬಳಕಾಯಿ ಹಾಗೂ ಹೂವು ಮಾರಾಟ ಮಾಡಲಾಗಿದೆ. ಮಾರಾಟವಾಗದ ವಸ್ತುಗಳನ್ನು ವ್ಯಾಪಾರಿಗಳು ಸ್ಥಳದಲ್ಲೆ ಬಿಟ್ಟುಹೋಗಿದ್ದಾರೆ ಜೊತೆಗೆ, ಜನರು ರಸ್ತೆಗಳಿಗೆ ತಮ್ಮ ವಾಹನಗಳಿಗೆ ಪೂಜೆ ಮಾಡಿ ಕುಂಬಳಕಾಯಿಯನ್ನು ಹೊಡೆದಿದ್ದಾರೆ. ಇದೆಲ್ಲದರಿಂದ ತ್ಯಾಜ್ಯ ಸಂಗ್ರಹ ಹೆಚ್ಚಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 4,900 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆದರೆ, ದಸರಾ ಉತ್ಸವದ ಕಾರಣ ಅಕ್ಟೋಬರ್ 12 (ಶನಿವಾರ) ರಂದು 6,306 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಭಾನುವಾರ 5,561 ಮೆಟ್ರಿಕ್ ಟನ್ ಮತ್ತು ಸೋಮವಾರ 5,866 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹ ಮಾಡಲಾಗಿದೆ” ಎಂದು ಹೇಳಿದ್ದಾರೆ.