ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿ, ಸ್ಥಳ ಮಹಜರು ನಡೆಸಿದ್ದಾರೆ.
ಬಂಧಿತನನ್ನು ಬಿಹಾರದ ಮೂಲದ ಸೈಯದ್ ನಸ್ರು ಎಂದು ಗುರುತಿಸಲಾಗಿದೆ. ಆರೋಪಿಯನ್ನು ಜನವರಿ 24ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುಡಿದ ಮತ್ತಿನಲ್ಲಿ ಆರೋಪಿ ಈ ಕೃತ್ಯವೆಸಗಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.
ಕೃತ್ಯ ನಡೆದ ಸ್ಥಳದಿಂದ ಸುಮಾರು 50 ಮೀಟರ್‌ನಷ್ಟು ದೂರ ಇರುವ ಪ್ಲಾಸ್ಟಿಕ್ ಹಾಗೂ ಬ್ಯಾಗ್ ಹೊಲಿಗೆ ಅಂಗಡಿಯಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಮದ್ಯದ ನಶೆಯಲ್ಲಿ ಹಸುಗಳ ಕೆಚ್ಚಲು ಕೊಯ್ದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಆರೋಪಿ ಒಬ್ಬನೇ ಕೃತ್ಯ ಎಸಗಿದ್ದಾನೆ. ಬೇರೆ ಯಾರೂ ಭಾಗಿ ಆಗಿಲ್ಲ. ಆದರೂ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದ್ದು, ಜನವರಿ 24ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಹಸುಗಳ ಮಾಲೀಕ ಕರ್ಣ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ಪ್ರರಕಣ ದಾಖಲಿಸಿಕೊಂಡ ಪೊಲೀಸರು ಭಾನುವಾರ ರಾತ್ರಿ ಓರ್ವ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ರಮೇಶ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪೊಲೀಸರು ತನಿಖೆ ನಡೆಸಿದ್ದಾರೆ.
ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹಸುಗಳು ಕ್ಷೇಮವಾಗಿವೆ. ಆದರೆ, ಇನ್ನೂ ಎರಡು ವಾರ ಗಾಯ ಮಾಸಲು ಸಮಯಬೇಕಿದೆ.
ಸ್ಥಳೀಯ ಶಾಸಕರು ಆಗಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಕಾಟನ್ ಪೇಟೆ ಪಶು ಆಸ್ಪತ್ರೆಗೆ ಭೇಟಿ ನೀಡಿ ಹಸುಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.
ನೀಡಿದ ಭರವಸೆಯಂತೆ ಹಸುಗಳ ಮಾಲೀಕ ಕರ್ಣ ಅವರಿಗೆ ಭಾನುವಾರವೇ ಮೂರು ಹಸುಗಳನ್ನು ಕೊಡಿಸಿದ್ದಾರೆ ಎಂದು ಸಚಿವರ ಕಚೇರಿ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬಗ್ಗೆ ಕೇಜ್ರಿವಾಲ್‌ಗೆ ಇರಲಿ ಎಚ್ಚರ
