ರಾಜಧಾನಿ ಬೆಂಗಳೂರಿನ ನಾನಾ ಪೊಲೀಸ್ ಠಾಣೆಗಳಲ್ಲಿ 2023ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಅಂದರೆ, ಕಳೆದ 9 ತಿಂಗಳಲ್ಲಿ 12,615 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಜನರು ಬರೋಬ್ಬರಿ ₹470 ಕೋಟಿ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
“ಬೆಂಗಳೂರಿನಲ್ಲಿ ಈ ವರ್ಷ ಜನವರಿಯಿಂದ ಸೆಪ್ಟೆಂಬರ್ ಅಂತ್ಯದ ತನಕ 18 ಮಾದರಿಯಲ್ಲಿ ಸೈಬರ್ ವಂಚನೆ ನಡೆದಿದೆ. ಈ ಮೂಲಕ ಜನ ₹470,53,92,258 ಕೋಟಿ ಕಳೆದುಕೊಂಡಿದ್ದಾರೆ. ಈ ಮೊತ್ತದ ಪೈಕಿ ₹201,83,28,534 ಕೋಟಿಯನ್ನು ನಾನಾ ಬ್ಯಾಂಕ್‌ಗಳಲ್ಲಿ ಪ್ರೀಜ್ ಮಾಡಲಾಗಿದೆ. ₹28,40,38,422 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ₹27,68,72,273 ಕೋಟಿಯನ್ನು ಹಣ ಕಳೆದುಕೊಂಡವರಿಗೆ ಹಿಂದಿರುಗಿಸಲಾಗಿದೆ. ಆಧಾರ್ ಬಯೋಮೆಟ್ರಿಕ್ಗಳನ್ನು ಬಳಸಿ ವಂಚಿಸಲಾಗಿದೆ. ಹಾಗಾಗಿ, ಸಾರ್ವಜನಿಕರು ಹೆಚ್ಚಾಗಿ ಗಮನ ಹರಿಸಬೇಕಿದೆ” ಎಂದು ತಿಳಿಸಿದ್ದಾರೆ.
“ಈ ಮೊದಲು ಅಂತಾರಾಷ್ಟ್ರೀಯ ಮಟ್ಟದ ವಂಚನೆ ಪ್ರಕರಣದಲ್ಲಿ ₹854 ಕೋಟಿ ಹಗರಣವನ್ನು ಪತ್ತೆ ಹಚ್ಚಲಾಗಿತ್ತು. ಅದರಲ್ಲಿ 5,903 ಪ್ರಕರಣಗಳಿದ್ದವು. ಈ ವರ್ಷದ 9 ತಿಂಗಳಲ್ಲಿ 18 ಮಾದರಿಯ 12,615 ಸೈಬರ್ ಕ್ರೈಂ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ₹470 ಕೋಟಿ ವಂಚನೆಯಾಗಿದೆ. ಉದ್ಯೋಗದ ಭರವಸೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಲೈಕ್ ಮಾಡಿಸುವುದು, ಕೊರಿಯರ್‌ನಲ್ಲಿ ಮಾದಕ ವಸ್ತುಗಳು ಬಂದಿವೆ ಎಂದು ಬೆದರಿಸುವುದು, ಅನಾಮಿಕವಾದಂತಹ ಲಿಂಕ್‍ಗಳನ್ನು ಕ್ಲಿಕ್ ಮಾಡುವುದು, ಒಟಿಪಿ ಹಂಚಿಕೊಳ್ಳುವುದು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಆರೋಪಿಗಳು ಸೈಬರ್ ಅಪರಾಧಗಳನ್ನು ಮಾಡುತ್ತಿದ್ದಾರೆ” ಎಂದರು.
“ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಹೆಚ್ಚುತ್ತಿದೆ. ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಸೈಬರ್ ಕ್ರೈಂ ನಡೆದ ಒಂದು ಗಂಟೆ ಒಳಗಿನ ಸಮಯವನ್ನು ‘ಗೋಲ್ಡನ್ ಅವರ್’ ಎಂದು ಕರೆಯುತ್ತೇವೆ. ಈ ಕಾಲಮಿತಿಯಲ್ಲಿ ರಾಷ್ಟ್ರವ್ಯಾಪಿ ಇರುವ 1930 ಸಹಾಯವಾಣಿಗೆ ಮಾಹಿತಿ ನೀಡಿದರೆ ವಂಚನೆ ಮಾಡಿ ಹಣ ಲಪಟಾಯಿಸಿದ ಖಾತೆಯನ್ನು ಜಪ್ತಿ ಮಾಡಲು ಮತ್ತು ಹಣವನ್ನು ವಾಪಸ್ ಕೊಡಿಸಲು ಸಾಧ್ಯತೆಗಳು ಹೆಚ್ಚಿರುತ್ತವೆ. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಜಾಗೃತಿ ಅಭಿಯಾನಗಳನ್ನು ಕೈಗೊಂಡಿದ್ದೇವೆ” ಎಂದು ವಿವರಿಸಿದರು.
- ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣದಲ್ಲಿ 3102 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ₹60,86,29,250 ಕೋಟಿ ಹಣವನ್ನು ಜನರು ಕಳೆದುಕೊಂಡಿದ್ದಾರೆ. ಈ ಪೈಕಿ ₹25,15,38,168 ಕೋಟಿ ಪ್ರೀಜ್ ಮಾಡಲಾಗಿದೆ. ₹3,38,25,252 ಕೋಟಿ ವಶಪಡಿಸಿಕೊಂಡಿದ್ದು, ₹3,55,70,898 ಕೋಟಿ ದೂರುದಾರರಿಗೆ ಹಿಂತಿರುಗಿಸಲಾಗಿದೆ.
- ಆನ್ ಲೈನ್ ವ್ಯಾಪಾರ ಅವಕಾಶ ವಂಚನೆ ಪ್ರಕರಣದಲ್ಲಿ 1133 ಪ್ರಕರಣ ದಾಖಲಾಗಿವೆ. ಇದರಲ್ಲಿ ₹60,53,87,250 ಕೋಟಿ ಹಣವನ್ನು ಜನ ಕಳೆದುಕೊಂಡಿದ್ದಾರೆ. ಈ ಪೈಕಿ ₹9,69,11,726 ಕೋಟಿ ಪ್ರೀಜ್ ಮಾಡಲಾಗಿದೆ. ₹13,37,08,306 ಕೋಟಿ ವಶಪಡಿಸಿಕೊಂಡಿದ್ದು, ₹11,82,08,075 ಕೋಟಿ ದೂರುದಾರರಿಗೆ ಹಿಂತಿರುಗಿಸಲಾಗಿದೆ.
- ಐ ಫೋನ್, ಗಿಫ್ಟ್, ಓಎಲ್‌ಎಕ್ಸ್ ಮತ್ತು ಸಾಲದ ಸಂಬಂಧದ ವಂಚನೆಗೆ ಸಂಬಂಧಿಸಿದಂತೆ 1132 ಪ್ರಕರಣ ದಾಖಲಾಗಿವೆ. ಈ ಪೈಕಿ ₹22,40,84,839 ಕೋಟಿ ಹಣವನ್ನು ಜನ ಕಳೆದುಕೊಂಡಿದ್ದಾರೆ. ಈ ಪೈಕಿ ₹6,39,09,912 ಕೋಟಿ ಪ್ರೀಜ್ ಮಾಡಲಾಗಿದೆ. ₹1,09,71,379 ಕೋಟಿ ಮೊತ್ತವನ್ನು ವಶಪಡಿಸಿಕೊಂಡು 9,37,526 ರೂಪಾಯಿ ದೂರುದಾರರಿಗೆ ಹಿಂತಿರುಗಿಸಲಾಗಿದೆ.
- ಸಾಮಾಜಿಕ ಜಾಲತಾಣ ಸಂಬಂಧ (511), ಲೋನ್ ಆಪ್ (277), ಲೈಂಗಿಕ ಪ್ರಕರಣ (84), ಬಿಟ್ ಕಾಯಿನ್ (195), ಕಾರ್ಡ್ ಸ್ಕಿಮ್ಮಿಂಗ್ (158), ಡೇಟಾ ಕಳವು (83), ಆಮದು ರಫ್ತು (54), ವಿವಾಹ (49), ಲಾಟರಿ (26) ಮತ್ತು ಆನ್ ಲೈನ್ ಗೇಮಿಂಗ್ ಸೇರಿದಂತೆ ಒಟ್ಟು 12,615 ಪ್ರಕರಣಗಳು ದಾಖಲಾಗಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೆಟ್ರೋ ಫೀಡರ್ ಬಸ್ ಆರಂಭ; ವಾರಕ್ಕೆ ಎರಡು ಬಾರಿ ಸಾರ್ವಜನಿಕ ಸಾರಿಗೆ ಬಳಸಲು ಪ್ರತಿಜ್ಞೆ ಮಾಡಿ
Protect yourself from cyber attacks with these steps!
If you encounter cyber crime, report to authorities: Call 1930#BeCyberSafe #CyberScam
ಯಾವುದೇ ಅನುಮಾನಾಸ್ಪದ ಲಿಂಕ್ ಗಳ ಮೇಲೆ ಕ್ಲಿಕ್ ಮಾಡದಿರಿ! ವಿವಿಧ ಬಗೆಯ ಸೈಬರ್ ದಾಳಿಗಳಿಂದ ತಪ್ಪಿಸಿಕೊಳ್ಳಲು ಈ ಕೆಳಕಂಡ ಹಂತಗಳನ್ನು ಅನುಸರಿಸಿ.
ಒಂದು ವೇಳೆ ನೀವು… pic.twitter.com/i9b2itIbPV
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) October 9, 2023
ಬಸ್ ನಿಲ್ದಾಣ ಕಳ್ಳತನವಾಗಿಲ್ಲ
ಪೊಲೀಸ್ ಕಮಿಷನರ್ ಕಚೇರಿ ಬಳಿ ಬಸ್ ನಿಲ್ದಾಣ ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಸ್ ನಿಲ್ದಾಣ ಕಳ್ಳತನವಾಗಿಲ್ಲ. ಬಿಬಿಎಂಪಿ ಅಧಿಕಾರಿಗಳು ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ತೆರವು ಮಾಡಿದ್ದಾರೆ ಎಂದು ಹೇಳಿದರು.
ಬಸ್ ಶೆಲ್ಟರ್ ಹಾಕಲು ಕೆಲಸ ಮಾಡುತ್ತಿದ್ದ ಸೈನ್ ಪೋಸ್ಟ್ ಕಂಪನಿಯವರು ಬಸ್ ಶೆಲ್ಟರ್ ಕಳ್ಳತನ ಆಗಿದೆ ಎಂದು ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲು ಮಾಡಲಾಗಿತ್ತು.
ಕಳಪೆ ಕಾಮಗಾರಿ ಹಿನ್ನೆಲೆ, ನೋಟಿಸ್ ನೀಡಿ ಬಿಬಿಎಂಪಿ ಅಧಿಕಾರಿಗಳು ಬಸ್ ನಿಲ್ದಾಣವನ್ನು ತೆರವು ಮಾಡಿದ್ದಾರೆ ಎಂದು ತನಿಖೆ ವೇಳೆ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.