- ಸಾಂಕ್ರಾಮಿಕ ರೋಗಗಳು ಹೆಚ್ಚಾದ ನಂತರ ಜಾಗರೂಕರಾದ ಜನ
- ಕಳೆದ ಎರಡು ವಾರಗಳಲ್ಲಿ ಫ್ಲೂ ಶಾಟ್ ಬೇಡಿಕೆ 30 ರಷ್ಟು ಹೆಚ್ಚಳ
ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಎಲ್ಲೆಡೆ ಮಳೆ ಆರಂಭವಾಗಿದೆ. ನೀರಿನ ಮಾಲಿನ್ಯ ಹಾಗೂ ಶುಚಿತ್ವದ ಕೊರತೆಯಿಂದ ಸೊಳ್ಳೆಗಳ ಹೆಚ್ಚಳವಾಗಿದೆ. ಇದರಿಂದ ಟೈಫಾಯಿಡ್, ಹೆಪಟೈಟಿಸ್ ಎ ಜತೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ, ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಜನರು ಜ್ವರ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.
“ಸಾಂಕ್ರಾಮಿಕ ರೋಗಗಳು ಹೆಚ್ಚಾದ ನಂತರ ಜನರು ಹೆಚ್ಚು ಜಾಗರೂಕರಾಗಿದ್ದಾರೆ. ಈಗ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕುಟುಂಬದಲ್ಲಿ ಕೇವಲ ಒಬ್ಬರಲ್ಲದೆ, ಇಡೀ ಕುಟುಂಬ ಜ್ವರ ಲಸಿಕೆ (ಫ್ಲೂ ಶಾಟ್) ತೆಗೆದುಕೊಳ್ಳುತ್ತಿದೆ. ಕಳೆದ ಒಂದು ವಾರದಲ್ಲಿ 25-30 ಫ್ಲೂ ಶಾಟ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುವುದನ್ನು ನಿರೀಕ್ಷಿಸುತ್ತಿದ್ದೇವೆ. ಲಸಿಕೆಯ ದಾಸ್ತಾನು ಇರಿಸಿಕೊಳ್ಳಲಾಗಿದೆ” ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಹಿರಿಯ ಸಲಹೆಗಾರ (ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್) ಡಾ. ಪರಿಮಳಾ ವಿ ತಿರುಮಲೇಶ್ ಹೇಳಿದ್ದಾರೆ.
“ಈ ಹಿಂದೆ, ವೈದ್ಯರು ಹೆಚ್ಚಿನ ಅಪಾಯ ಹೊಂದಿರುವ ರೋಗಿಗಳಿಗೆ ಮಾತ್ರ ಫ್ಲೂ ಶಾಟ್ ಪಡೆಯಲು ಸಲಹೆ ನೀಡುತ್ತಿದ್ದರು. ಆದರೆ, ಈಗ ಎಲ್ಲರೂ ಪ್ರತಿ ವರ್ಷ ಫ್ಲೂ ಶಾಟ್ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ದಿನನಿತ್ಯದ ಲಸಿಕೆಗಳಿಗಿಂತ ಹೆಚ್ಚಾಗಿ ಜನರು ಫ್ಲೂ ಶಾಟ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ” ಎಂದು ಡಾ ಪರಿಮಳಾ ಹೇಳಿದರು.
“ಲಸಿಕೆ ಕೇವಲ 70 ಪ್ರತಿಶತ ಪರಿಣಾಮಕಾರಿಯಾಗಿದ್ದರೂ, ಇದು ಜ್ವರದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಗಂಭೀರ ಕಾಯಿಲೆಗಳನ್ನು ಉಂಟುಮಾಡುವುದಿಲ್ಲ. ದುರ್ಬಲ ಜನರಿಗೆ ರೋಗಗಳು ಹರಡುವುದನ್ನು ತಡೆಯುತ್ತದೆ” ಎಂದು ಅವರು ಹೇಳಿದರು.
“ಇನ್ನೂ ಎರಡ್ಮೂರು ತಿಂಗಳ ಕಾಲ ಇದೇ ಸ್ಥಿತಿ ಇರಲಿದೆ. ಹಾಗಾಗಿ, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳಲ್ಲಿ ಪ್ರತಿದಿನ 20-30 ರೋಗಿಗಳು ಲಸಿಕೆ ಪಡೆಯುತ್ತಿದ್ದಾರೆ. ಶಾಲೆಗಳ ಪುನರಾರಂಭವು ಬೇಡಿಕೆಯ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಿದೆ” ಎಂದು ಎಎಎಸ್‌ಆರ್‌ಎ (AASRA) ಆಸ್ಪತ್ರೆಗಳ ಅಧ್ಯಕ್ಷ ಡಾ ಜಗದೀಶ್ ಹಿರೇಮಠ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಜುಲೈ 18ರಿಂದ ಪ್ಲಾಟ್‌ಫಾರ್ಮ್ ನಂ 1ರ ಮೂಲಕ ಯಶವಂತಪುರ ರೈಲು ನಿಲ್ದಾಣ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ
“ಕಳೆದ ಎರಡು ವಾರಗಳಲ್ಲಿ ಫ್ಲೂ ಶಾಟ್‌ಗಳ ಬೇಡಿಕೆಯಲ್ಲಿ 30 ಪ್ರತಿಶತ ಹೆಚ್ಚಳವಾಗಿದೆ. ಲಸಿಕೆ ಸಹಾಯಕವಾಗಿದ್ದರೂ, ಜನರು ಜಂಕ್ ಫುಡ್ ತಿನ್ನುವುದನ್ನು ಬಿಡಬೇಕು. ಆರೋಗ್ಯಕರ ಆಹಾರವನ್ನು ಸೇವಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡದಿರುವುದು ವ್ಯಕ್ತಿಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಬಹಳ ನಿರ್ಣಾಯಕವಾಗಿದೆ” ಎಂದು ವೈದ್ಯರು ಹೇಳಿದರು.
ನೆರೆಯ ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯ ಆರೋಗ್ಯ ಇಲಾಖೆಯೂ ಸಹ ಪ್ರಕರಣಗಳ ಹೆಚ್ಚಳದ ಬಗ್ಗೆ ನಿಗಾ ಇರಿಸಿದೆ.