ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ (ಕೆಪಿಸಿಎಲ್) ಖಾಲಿ ಇರುವ 622 ಎ.ಇ ಮತ್ತು ಜೆ.ಇ ಹುದ್ದೆಗಳ ಭರ್ತಿಗೆ ‘ಇಂಜನಿಯರ್ ಕೆಮಿಸ್ಟ್ ಕೆಮಿಕಲ್ ಸೂಪರ್ ವೈಸರ್’ ನೇಮಕಾತಿ ಪರೀಕ್ಷೆ ನಡೆದಿದೆ. ಪರೀಕ್ಷಾ ಫಲಿತಾಂಶವೂ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ಉತೀರ್ಣರಾದವರಿಗೆ ಇನ್ನೂ ನೇಮಕಾತಿ ಪತ್ರ ನೀಡಿಲ್ಲ. ಕೂಡಲೇ ನೇಮಕಾತಿ ಪತ್ರ ನೀಡಬೇಕೆಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ಒತ್ತಾಯಿಸಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿದೆ. “ಕೆಪಿಸಿಎಲ್ ನೇಮಕಾತಿಗೆ 2017ರಲ್ಲಿಯೇ ಅಧಿಸೂಚನೆ ಹೊರಡಿಸಲಾಗಿತ್ತು. 2024ರ ಫೆಬ್ರವರಿಯಲ್ಲಿ ಪರೀಕ್ಷೆ ನಡೆಸಿ, ಫಲಿತಾಂಶವನ್ನೂ ಪ್ರಕಟಿಸಲಾಗಿದೆ. 2024ರ ಸೆಪ್ಟೆಂಬರ್‌ನಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಆದರೆ, ಈಗ ನೇಮಕಾತಿಗೆ ಕಾನೂನು ತೊಡಕಿದೆ ಎಂಬ ನೆಪವೊಡ್ಡಿ ಕಳೆದ 5 ತಿಂಗಳಿನಿಂದ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದೆ ವಿಳಂಬ ಮಾಡಲಾಗಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ 8 ವರ್ಷಗಳಾಗಿವೆ. ಈಗಾಗಲೇ 8 ವರ್ಷಗಳ ವಿಳಂಬವಾಗಿದೆ. ಪರೀಕ್ಷೆ ಬರೆದು, ಆಯ್ಕೆಯಾಗಿರುವ ಹಲವಾರು ಯುವಜನರು ನಿರುದ್ಯೋಗದ ಸಮಸ್ಯೆ, ಕೌಟಂಬಿಕ ಸಮಸ್ಯೆಗಳಿಂದ ನೊಂದು-ಬೆಂದು ನರಕಯಾತನೆ ಅನುಭವಿಸುತ್ತಿದ್ದೇವೆ. ಎಲ್ಲ ಅಭ್ಯರ್ಥಿಗಳ ಜೀವನ ಅತಂತ್ರ ಸ್ಥಿತಿಯಲ್ಲಿದೆ. ಎಲ್ಲರ ಭವಿಷ್ಯ ಕೆಪಿಸಿಎಲ್ ನೇಮಕಾತಿಯ ಮೇಲೆಯೇ ನಿರ್ಧಾರವಾಗಿದೆ. ಕೂಡಲೇ ನೇಮಕಾತಿ ಪೂರ್ಣಗೊಳಿಸಿ, ಆದೇಶ ಪ್ರತಿ ನೀಡಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಮತ್ತು ಇಂಧನ ಸಚಿವರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಅದ್ಯಕ್ಷ ಕಾಂತ್ ಕುಮಾರ್, ಉಪಾಧ್ಯಕ್ಷರಾದ ಶ್ರೇಯಸ್ಸು, ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್, ಕಾರ್ಯದರ್ಶಿ ಅಭಿಲಾಶ ರವರು ಉತೀರ್ಣರಾದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.