ಬೆಂಗಳೂರಿನಲ್ಲಿ ಶಾಲಾ ವಾಹನ ಚಾಲಕರು ಮದ್ಯ ಸೇವಿಸಿ ಚಾಲನೆ ಮಾಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಪೊಲೀಸರು ಅಂತಹ ಚಾಲಕರನ್ನ ಗುರುತಿಸುತ್ತಿದ್ದು, ಬರೋಬ್ಬರಿ 108 ಚಾಲಕ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸುವವರನ್ನು ಪತ್ತೆ ಹಚ್ಚಲು ಸಂಚಾರಿ ಪೊಲೀಸರು ಹಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ 9 ತಿಂಗಳಲ್ಲಿ 108 ಮಂದಿ ಶಾಲಾ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಂತಹ ಚಾಲಕರ ಚಾಲನಾ ಪರವಾನಗಿ (ಡಿ.ಎಲ್) ಅಮಾನತು ಮಾಡುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಿದ್ದಾರೆ.
“ಶಾಲಾ ಮಕ್ಕಳನ್ನು ಸಾಗಿಸುವ ಕೆಲಸದ ಅವಧಿಯಲ್ಲಿ ನಿಯಮಿತ ತಪಾಸಣೆ ನಡೆಸಲಾಗಿದೆ. ಕೆಲ ಶಾಲಾ ವಾಹನ ಚಾಲಕರು ಮದ್ಯ ಸೇವಿಸಿ ಸಿಕ್ಕಿಬಿದ್ದಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಚಾಲಕರಿಗೆ ತಲಾ 10,000 ರೂ. ದಂಡ ವಿಧಿಸಲಾಗಿದೆ. ಅಲ್ಲದೆ, ಕೆಲವು ಚಾಲಕರ ‘ಡಿಎಲ್’ಅನ್ನು ಸಾರಿಗೆ ಇಲಾಖೆ ಅಮಾನತು ಮಾಡಿದ್ದರೂ, ಮದ್ಯ ಸೇವಿಸಿ, ಚಾಲನೆ ಮಾಡುವುದು ಕಂಡುಬಂದಿದೆ. ಅಂತಹ ಚಾಲಕರ ಪರವಾನಗಿಯನ್ನು ಅಮಾನತು ಮಾಡುವ ಬದಲು, ರದ್ದುಗೊಳಿಸಬೇಕೆಂದು ಚಾರಿಗೆ ಇಲಾಖೆಗೆ ಮನವಿ ಮಾಡಿದ್ದೇವೆ” ಎಂದು ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ರೈತ ವಿರೋಧಿ ಯಾರು- ಬಿಜೆಪಿಯೇ ಅಥವಾ ವಕ್ಫ್ ಮಂಡಳಿಯೇ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಮದ್ಯ ಸೇವಿಸಿ ಚಾಲನೆ ಮಾಡುವುದು ಒಂದೆಡೆಯಾದರೆ, ಸಿಗ್ನಲ್ ಜಂಪ್, ಅತಿವೇಗದ ಆರೋಪಗಳೂ ಶಾಲಾ ವಾಹನ ಚಾಲಕರ ವಿರುದ್ಧ ಕೇಳಿಬಂದಿವೆ. ಅಲ್ಲದೆ, ಬರೋಬ್ಬರಿ 679 ಶಾಲಾ ವಾಹನಗಳು ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೊಂಡೊಯ್ಯುವುದು ಕೂಡ ಕಂಡುಬಂದಿದೆ. ಅಂತಹ ವಾಹನಗಳ ಮಾಲೀಕರು ಮತ್ತು ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.