ಬೆಂಗಳೂರಿನಲ್ಲಿ ಭಾನುವಾರ ರಾತ್ರಿಯಿಂದ ಮಳೆ ಅಬ್ಬರ ಹೆಚ್ಚಾಗಿದೆ. ಧಾರಾಕಾರವಾಗಿ ಮಳೆ ಸುರಿಯದಿದ್ದರೂ, ನಿರಂತರವಾಗಿ ಸಾಧಾರಣ ಮಳೆ ಸುರಿಯುತ್ತಿದೆ. ಸಣ್ಣ ಪ್ರಮಾಣದಲ್ಲಿ ಬೀಳುತ್ತಿರುವ ಮಳೆಗೆ ಬೆಂಗಳೂರು ಜಲಾವೃತಗೊಳ್ಳುತ್ತಿದೆ. ನೀರು ಹರಿಯಲು ಉತ್ತಮ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳು, ಬೀದಿಗಳಲ್ಲಿ ಪ್ರವಾಹದಂತೆ ನೀರು ಹರಿಯುತ್ತಿದೆ. ಅದರಲ್ಲೂ, ಶ್ರೀಸಾಯಿ ಲೇಔಟ್, ಮಾನ್ಯತಾ ಟೆಕ್‌ಪಾರ್ಟ್‌ಗಳು ನೀರಿನಲ್ಲಿ ಮುಳುಗಿಹೋಗಿವೆ. ಸಾಯಿ ಲೇಔಟ್‌ನ ಜನರ ಬದುಕು ದುಸ್ತರವಾಗಿದೆ.
ಸೋಮವಾರ ಸುರಿದ ಮಳೆಗೆ ಶೀಸಾಯಿ ಲೇಔಟ್ ನೀರಿನಲ್ಲಿ ಮುಳುಗಿಹೋಗಿತ್ತು. ರಸ್ತೆ, ಬೀದಿಗಳಲ್ಲಿ ಆಳೆತ್ತರಕ್ಕೆ ನೀರು ನಿಂತಿತ್ತು. ಮಳೆಗಳು, ಕಚೇರಿಗಳು, ಅಂಗಡಿ ಮುಂಗಟ್ಟುಗಳೂ ಜಲಾವೃತಗೊಂಡಿದ್ದವು. ಜನರು ತಮ್ಮ ಮನೆಯ ತಾರಸಿಗಳಲ್ಲಿ ರಾತ್ರಿ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಎಲ್ಲೆಡೆ ನೀರು ನುಗ್ಗಿದ್ದರಿಂದಾಗಿ ಗೃಹೋಪಯೋಗಿ ವಸ್ತುಗಳು, ಆಹಾರ ಪದಾರ್ಥಗಳು, ವಾಹನಗಳು ನೀರಿನಲ್ಲಿ ತೋಯ್ದು-ಕೊಚ್ಚಿ ಹೋಗಿವೆ. ಕೋಟ್ಯಂತರ ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಿದೆ ಎಂದು ಹೇಳಲಾಗಿದೆ. ಅಲ್ಲಿನ ನಿವಾಸಿಗಳಿಗೆ ಬಿಬಿಎಂಪಿ ನೌಕರರು ಬೋಟ್ ಮತ್ತು ಟ್ರ್ಯಾಕ್ಟರ್‌ಗಳ ಮೂಲಕ ಆಹಾರದ ವಿತರಿಸಿದ್ದಾರೆ.
ಈ ವರದಿ ಓದಿದ್ದೀರಾ: ಗುಲಬರ್ಗಾ ವಿವಿ ಕರ್ಮಕಾಂಡ-3: ಮೂರು ವರ್ಷಗಳಿಂದ 9,024 ಫಲಿತಾಂಶ ಪೆಂಡಿಂಗ್!
ಸ್ಥಳಕ್ಕೆ ಶಾಸಕ ಬೈರತಿ ಬಸವರಾಜು, ಬಿಬಿಎಂಪಿ ಅಡಳಿತಾಧಿಕಾರಿ ತುಷಾರ್ ಗಿರಿನಾಥ್ ಹಾಗೂ ಬಿಡಿಎ ಆಯುಕ್ತ ಜಯರಾಂ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
“ಲೇಔಟ್‌ನಲ್ಲಿನ ನೀರು ಸಂಪೂರ್ಣವಾಗಿ ಹರಿದು ಹೋಗಲು ಹೆಚ್ಚು ಸಮಯ ಬೇಕು. ಮಂಗಳವಾರ ರಾತ್ರಿಯೂ ಮತ್ತೆ ಮಳೆಯಾದರೆ, ಮುನ್ನೆಚ್ಚರಿಕೆಯಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಜಲವೃತ ಪ್ರದೇಶಗಳಿಂದ ಹೊರಬರುವಂತೆ ಅಲ್ಲಿನ ನಿವಾಸಿಗಳಿಗೆ ತಿಳಿಸಿದ್ದೇವೆ. ಅಲ್ಲೇ ಇರುವವರಿಗೆ ಆಹಾರ ಪೂರೈಕೆ ಮಾಡುತ್ತಿದ್ದೇವೆ” ಎಂದು ಗಿರಿನಾಥ್ ಹೇಳಿದ್ದಾರೆ.