ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೀದಿನಾಯಿಗಳ ಗಣತಿಗೆ ಡ್ರೋನ್ ಬಳಸಲು ಮುಂದಾಗಿದೆ.
ಕಳೆದ ನಾಲ್ಕು ವರ್ಷಗಳ ಬಳಿಕ ನಗರದಲ್ಲಿರುವ ಬೀದಿನಾಯಿಗಳ ಸಮೀಕ್ಷೆಯನ್ನು ಬಿಬಿಎಂಪಿ ಪಶುಪಾಲನಾ ವಿಭಾಗ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಹಯೋಗದಲ್ಲಿ ನಡೆಸುತ್ತಿದೆ. ಈಗಾಗಲೇ ಬೀದಿನಾಯಿಗಳ ಗಣತಿ ಆರಂಭವಾಗಿದ್ದು, ಪ್ರಮುಖ ಸ್ಥಳಗಳಲ್ಲಿ ಡ್ರೋನ್ ಬಳಸಿ ಗಣತಿ ಮಾಡಲಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯ 840 ಚದರ ಕಿಲೋ ಮೀಟರ್ ಅನ್ನು ತಲಾ 0.5 ಚ.ಕಿ.ಮೀ ವ್ಯಾಪ್ತಿಯಂತೆ 6,850 ಮೈಕ್ರೋ ವಲಯಗಳಾಗಿ ವಿಂಗಡಿಸಿಕೊಂಡು ಪ್ರತಿ ದಿನ 0.5 ಕಿ.ಮೀ ವ್ಯಾಪ್ತಿಯಲ್ಲಿ ತಲಾ ಒಂದು ತಂಡ ಬೈಕ್ನಲ್ಲಿ ಗಣತಿ ನಡೆಸುತ್ತಿದ್ದಾರೆ. ಆದರೆ, ಕೆರೆ ಅಂಗಳದಲ್ಲಿ ಬೈಕ್ ಸಂಚಾರ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಡ್ರೋನ್ ಹಾರಾಟ ನಡೆಸಲಿದೆ.
ಗಣತಿ ಮಾಡುವ ಸಿಬ್ಬಂದಿ ನೂರಾರು ಎಕರೆ ಪ್ರದೇಶದಲ್ಲಿ ಓಡಾಟ ಮಾಡಿ ಗಣತಿ ನಡೆಸುವುದು ಕಷ್ಟವಾಗಿದೆ. ಹಾಗಾಗಿ, ಪ್ರಮುಖವಾಗಿ ಸಾರಕ್ಕಿ ಕೆರೆ, ಎಲೆಮಲ್ಲಪ್ಪ ಚೆಟ್ಟಿಕೆರೆ ಹಾಗೂ ಹುಳಿಮಾವು ಕೆರೆಯಲ್ಲಿ ಡ್ರೋನ್ ಬಳಕೆ ಮಾಡಲಾಗುತ್ತಿದೆ. ಡ್ರೋನ್ಗೆ ಯಾವುದೇ ವೆಚ್ಚವಿಲ್ಲ. ಉಚಿತವಾಗಿ ಗಣತಿ ಪ್ರಕ್ರಿಯೆ ಮಾಡುವುದಕ್ಕೆ ಡ್ರೋನ್ ಸ್ಟಾರ್ಟ್ಅಪ್ ಕಂಪನಿಗಳು ಮುಂದೆ ಬಂದಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೆತ್ತ ತಂದೆ-ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ಮಗ
ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಬೀದಿನಾಯಿಗಳ ಗಣತಿಗೆ ಡ್ರೋನ್ ಬಳಕೆ ಮಾಡಲಾಗುತ್ತಿದೆ. ಮೊದಲಿಗೆ ಕೆರೆಯ ಅಂಗಳದಲ್ಲಿ ಡ್ರೋನ್ ಬಳಕೆ ಮಾಡಲಾಗುತ್ತಿದೆ. ಇಲ್ಲಿ ಗಣತಿ ಮಾಡುವುದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಮೈದಾನ, ಖಾಲಿ ನಿವೇಶನ, ಪಾರ್ಕ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಳಕೆ ಮಾಡಲಾಗುವುದು. ಇದರಿಂದ ಶ್ರಮ ಮತ್ತು ಸಮಯ ಉಳಿತಾಯವಾಗುತ್ತದೆ. ತ್ವರಿತಗತಿಯಲ್ಲಿ ಗಣತಿ ಕಾರ್ಯ ಮುಗಿಸಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ತ್ರಿಲೋಕಚಂದ್ರ ಹೇಳಿದರು.