ಸಾಲದ ಇಎಂಐ ಪಾವತಿಸುವಂತೆ ಪದೇಪದೇ ಪೀಡಿಸುತ್ತಿದ್ದ ಚೀನಾ ಮೂಲದ ಆ್ಯಪ್ನವರ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಎಚ್ಎಂಟಿ ಕ್ವಾಟರ್ಸ್ನಲ್ಲಿ ನೆಲೆಸಿದ್ದ ವಿದ್ಯಾರ್ಥಿ ತೇಜಸ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ತೇಜಸ್ ತನ್ನ ಸ್ನೇಹಿತ ಮಹೇಶ್ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದುಕೊಂಡಿದ್ದ. ಲೋನ್ ಪಡೆದ ಬಳಿಕ ಕಳೆದ ಒಂದು ವರ್ಷದಿಂದ ಸ್ನೇಹಿತ ಮಹೇಶ್ ಇಎಂಐ ಹಣ ತುಂಬಿರಲಿಲ್ಲ. ಹೀಗಾಗಿ, ತೇಜಸ್ಗೆ ಲೋನ್ ನೀಡಿದವರು, ಬಾಕಿ ಉಳಿದಿರುವ ಇಎಂಐ ಕಟ್ಟಬೇಕು ಎಂದು ಪದೇಪದೇ ಪೀಡಿಸುತ್ತಿದ್ದರು ಎಂದು ತಿಳಿದುಬಂದಿದೆ.
ಲೋನ್ ಕೊಟ್ಟವರ ಕಿರುಕುಳದಿಂದ ಬೇಸತ್ತ ತೇಜಸ್ ಡೆತ್ನೋಟ್ ಬರೆದಿಟ್ಟು ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜುಲೈ 13ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ
ಡೆತ್ನೋಟ್ನಲ್ಲೇನಿದೆ?
ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ. ನಾನು ಮಾಡಿರುವ ಸಾಲ ತಿರಿಸಲಾಗುವುದಿಲ್ಲ. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿ ಇಲ್ಲ. ಇದೇ ನನ್ನ ಕೊನೆ ತೀರ್ಮಾನ ‘ಥ್ಯಾಂಕ್ಸ್ ಗುಡ್ ಬೈ’ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ತೇಜಸ್ ಪೋಷಕರು ಜಾಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.