ರಾಜ್ಯದಲ್ಲಿ ಇತ್ತೀಚೆಗೆ ಹನಿಟ್ರ್ಯಾಪ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ, ಪತಿ ಮತ್ತು ಪತ್ನಿ ಇಬ್ಬರು ಸೇರಿ ಹನಿಟ್ರ್ಯಾಪ್ ನಡೆಸುತ್ತಿದ್ದ ಜಾಲವೊಂದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ ಬಂಧಿತರು. ಈ ಪೈಕಿ ಖಲೀಮ್ ಮತ್ತು ಸಭಾ ದಂಪತಿ.
ಅತೀವುಲ್ಲಾ ಎಂಬ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್‌ಗೆ ಸಿಲುಕಿಸಿ ಅವರಿಂದ ಹಣ ಲಪಾಟಾಯಿಸಲು ಬಂಧಿತ ಆರೋಪಿಗಳು ಸಂಚು ರೂಪಿಸಿದ್ದರು. ಇವರ ಜೊತೆ ಈ ದಂಧೆಯಲ್ಲಿ ಓಬೆದ್ ರಕೀಮ್, ಅತೀಕ್ ಕೂಡ ಸೇರಿದ್ದರು ಎಂದು ತಿಳಿದು ಬಂದಿದೆ.
ಆರೋಪಿ ಖಲೀಮ್ ತನ್ನ ಪತ್ನಿ ಸಭಾಳನ್ನ ವಿಧವೆ ಅಂತಾ ಅತೀವುಲ್ಲಾಗೆ ಪರಿಚಯ ಮಾಡಿಸಿಕೊಟ್ಟು ಆಕೆಯನ್ನು ನೋಡಿಕೊಳ್ಳುವಂತೆ ಹೇಳಿದ್ದನು. ನಂತರ ಸಭಾ ಮತ್ತು ಅತೀವುಲ್ಲಾ ನಡುವೆ ಕೆಲವು ಬಾರಿ ದೈಹಿಕ ಸಂಪರ್ಕ ನಡೆದಿತ್ತು.
ಕೆಲ ದಿನಗಳ ನಂತರ ಅತೀವುಲ್ಲಾನನ್ನು ಸಭಾ ‘ಆರ್ ಆರ್ ನಗರದಲ್ಲಿ ರೂಮ್ ಬುಕ್ ಮಾಡಲು ಆಧಾರ್ ಕಾರ್ಡ್ ತೆಗೆದುಕೊಂಡು ಬಾ’ ಎಂದು ಕರೆದಿದ್ದಾಳೆ.
ಅದರಂತೆ ಡಿಸೆಂಬರ್ 14ರಂದು ಆರ್‌ಆರ್ ನಗರಕ್ಕೆ ಅತೀವುಲ್ಲಾ ಅವರು ಆಧಾರಕಾರ್ಡ್ ಜತೆಗೆ ಬಂದಿದ್ದರು. ಬಳಿಕ ಸಭಾ ಮತ್ತು ಅತೀವುಲ್ಲಾ ರೂಮ್ ಬುಕ್ ಮಾಡಿ ಒಳಗಡೆ ಹೋಗಿದ್ದಾರೆ. ರೂಮ್‌ಗೆ ತೆರಳಿದ ಸ್ವಲ್ಪ ಹೋತ್ತಲ್ಲೇ, ಖಲೀಮ್, ರಕೀಬ್, ಅತೀಕ್ ರೂಮ್‌ಗೆ ಬಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಎಕ್ಸ್’ ಖಾತೆಯಲ್ಲಿ ಇಂಧನ ಸಚಿವ ಜಾರ್ಜ್ ವಿರುದ್ಧ ದುರುದ್ದೇಶಪೂರಿತ ಪೋಸ್ಟ್ ಮಾಡಿದವನ ಬಂಧನ
ಈ ವೇಳೆ, ‘ಈ ವಿಚಾರವನ್ನು ನಿನ್ನ ಮನೆಯವರಿಗೆ ತಿಳಿಸ್ತೀವಿ. ನಿನ್ನ ಮರ್ಯಾದೆ ತೆಗೆಯುತ್ತೇವೆ” ಎಂದು ಗಲಾಟೆ ಆರಂಭಿಸಿದ್ದಾರೆ. ಈ ವಿಚಾರ ಯಾರಿಗೂ ತಿಳಿಸಬಾರದು ಎಂದರೆ ₹6 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಹಣ ಕೊಡುತ್ತೇನೆ ಎಂದ ಉದ್ಯಮಿ ಅತೀವುಲ್ಲಾ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ವೇಳೆ ಹೋಟೆಲ್‌ಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು, ರೆಡ್ ಹ್ಯಾಂಡ್ ಆಗಿ ಹನಿಟ್ರ್ಯಾಪ್ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಇದೇ ರೀತಿ ಹಲವರಿಗೆ ಸುಲಿಗೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.