ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗೆ ಯತ್ನ ಹಾಗೂ ಹಳಿಗೆ ಜಿಗಿಯುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದನ್ನು ತಡೆಗಟ್ಟಲು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನಿರ್ಧಾರ ಮಾಡಿದೆ.
ನಮ್ಮ ಮೆಟ್ರೋದಲ್ಲಿ ಉಂಟಾಗುತ್ತಿರುವ ಅವಘಡಗಳನ್ನು ತಡೆಯಲು ಶೀಘ್ರದಲ್ಲಿಯೇ ಹೆಚ್ಚುವರಿಯಾಗಿ 326 ಸಿಬ್ಬಂದಿಯನ್ನು ಬಿಎಂಆರ್ಸಿಎಲ್ ನಿಯೋಜಿಸಲಿದೆ.
ರೈಲುಗಳು ಸಂಚರಿಸುವಾಗ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು, ಪ್ರಯಾಣಿಕರ ಚಲನವಲನದ ಮೇಲೆ ನಿಗಾ ಇಡಲು, ರೈಲುಗಳ ಆಗಮನದ ಮೊದಲು ಪ್ರಯಾಣಿಕರನ್ನು ಸರದಿ ಸಾಲಿನಲ್ಲಿ ನಿಲ್ಲಿಸುವುದು, ಹಳದಿ ಗೆರೆ ದಾಟದಂತೆ ನೋಡಿಕೊಳ್ಳುವುದು ಭದ್ರತಾ ಸಿಬ್ಬಂದಿ ಕೆಲಸವಾಗಿದೆ.
ಅವಘಡ ತಡೆಯಲು ಶೀಘ್ರದಲ್ಲೇ ಒಂಬತ್ತು ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್ ಫಾರಂಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ.
ನಮ್ಮ ಮೆಟ್ರೊ ಎಂಟು ಭೂಗತ ನಿಲ್ದಾಣ ಸೇರಿದಂತೆ 65 ನಿಲ್ದಾಣಗಳನ್ನು ಹೊಂದಿದೆ. ಅಲ್ಲದೆ, ಅವುಗಳಲ್ಲಿ ಯಾವುದೂ ಪ್ಲಾಟ್ಫಾರ್ಮ್ ಪರದೆಯ ಬಾಗಿಲು ಅಥವಾ ಗೇಟ್ಗಳನ್ನು ಹೊಂದಿಲ್ಲ. ಹೆಚ್ಚುವರಿ ಸಿಬ್ಬಂದಿ ನೇಮಕದ ಜತೆಗೆ ಪ್ಲಾಟ್ಫಾರಂ ಸ್ಟ್ರೀನ್ ಡೋರ್ (ಪಿಎಸ್ಡಿ) ಅಳವಡಿಸಲು ಚಿಂತನೆ ನಡೆದಿದ್ದು, ಸಿಬಿಟಿಸಿ ಸಿಗ್ನಲಿಂಗ್ ಮತ್ತು ಪ್ಲಾಟ್ ಫಾರ್ಮ್ ಸ್ಟ್ರೀನ್ ಡೋರ್ಗೆ (ಪಿಎಸ್ಡಿ) ಟೆಂಡರ್ ಕರೆಯಲಾಗಿದ್ದು, ಅಲ್ಸ್ಟಾಮ್ ಟ್ರಾನ್ಸ್ ಪೋರ್ಟ್ ಇಂಡಿಯಾ ಈ ಟೆಂಡರ್ ಪಡೆದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಲ್ಡರ್ ಅಪಹರಿಸಿ ಕಿರುಕುಳ ನೀಡಿದ 8 ಜನರ ವಿರುದ್ಧ ಎಫ್ಐಆರ್ ದಾಖಲು
ಸುರಕ್ಷತೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬಿಎಂಆರ್ಸಿಎಲ್, ರೈಲು ನಿಲ್ದಾಣದಲ್ಲಿ ಪ್ಲಾಟ್ಫಾರಂ ಸ್ಕ್ರೀನ್ ಡೋರ್ (ಪಿಎಸ್ಡಿ) ಅಳವಡಿಸಲು ಮುಂದಾಗಿದೆ.
ಪಿಎಸ್ಡಿ ಅಳವಡಿಕೆಗೆ ₹857 ಕೋಟಿ ಬಿಡ್ಗೆ ಟೆಂಡರ್ ಅಂತಿಮವಾಗಿದೆ. ಪಿಎಸ್ಡಿಯನ್ನೂ 13 ಅಂಡರ್ ಗ್ರೌಂಡ್ ಹಾಗೂ 37 ಎಲಿವೇಟೆಡ್ ನಿಲ್ದಾಣಗಳಲ್ಲಿ ನಿರ್ಮಿಸಲು ಯೋಜಿಸಲಾಗಿದೆ.