2019ರ ಏಪ್ರಿಲ್‌ಗಿಂತ ಮೊದಲು ನೋಂದಣಿಯಾದ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸಲು ನೀಡಿದ್ದ ಗಡುವು (ನವೆಂಬರ್ 17) ಸಮೀಪಿಸುತ್ತಿದ್ದರೂ, ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 2 ಕೋಟಿಯಷ್ಟು ಹಳೆಯ ವಾಹನಗಳ ಪೈಕಿ ಕೇವಲ 1.75 ಲಕ್ಷ (ಶೇ.10 ಕ್ಕಿಂತ ಕಡಿಮೆ) ವಾಹನಗಳು ಮಾತ್ರ ತಮ್ಮ ಫಲಕಗಳನ್ನು ನವೀಕರಿಸಿವೆ ಎನ್ನಲಾಗಿದೆ.
ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವನ್ನು ರಾಜ್ಯ ಸರ್ಕಾರ ವಿಸ್ತರಿಸುವ ಸಾಧ್ಯತೆಯಿದ್ದು, ನಂಬರ್ ಪ್ಲೇಟ್ ಅಳವಡಿಕೆಗೆ ಜನರನ್ನು ಉತ್ತೇಜಿಸಲು ವ್ಯಾಪಕ ಪ್ರಚಾರ ನೀಡುವ ಸಾಧ್ಯತೆಯಿದೆ ಎಂದು ಹಿರಿಯ ಸಾರಿಗೆ ಅಧಿಕಾರಿಗಳು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
“ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಎಂಒಆರ್‌ಟಿಎಚ್) ಭದ್ರತೆ ಸೇರಿದಂತೆ ಹಲವು ಕಾರಣಗಳಿಗಾಗಿ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಂಟಿಸುವುದನ್ನು ಕಡ್ಡಾಯಗೊಳಿಸಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಒಮ್ಮೆ ಅಳವಡಿಸಿದ ಬಳಿಕ ತೆಗೆದುಹಾಕಲು ಸಾಧ್ಯವಿಲ್ಲ. ಅವುಗಳನ್ನು ರಿವಿಟ್‌ಗಳನ್ನು ಬಳಸಿ ಅಳವಡಿಸುವುದರಿಂದ ಪ್ಲೇಟನ್ನು ಮುರಿಯಬೇಕಾಗುತ್ತದೆ. ಇದರಿಂದಾಗಿ ನಂಬರ್ ಪ್ಲೇಟ್‌ಗಳ ವಿನಿಮಯಕ್ಕೆ ಯಾವುದೇ ಅವಕಾಶ ಇರುವುದಿಲ್ಲ. 2019ರ ಏಪ್ರಿಲ್ 1ಕ್ಕಿಂತ ಮೊದಲು ರಾಜ್ಯದಲ್ಲಿ ಸುಮಾರು 2 ಕೋಟಿ ವಾಹನಗಳು ನೋಂದಣಿಯಾಗಿವೆ. ಏಪ್ರಿಲ್ 2019 ರ ನಂತರ ನೋಂದಾಯಿಸಿರುವ ಎಲ್ಲ ವಾಹನಗಳಿಗೂ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅ.31ರಂದು ಮಲೆನಾಡು-ಕರಾವಳಿ ಸಮಸ್ಯೆಗಳ ಸಮಾಲೋಚನೆ ಸಭೆ
“ರಾಜ್ಯ ಸರ್ಕಾರದ ಅಧಿಸೂಚನೆಯು ಹಳೆಯ ವಾಹನಗಳು ಸಾಲಿನಲ್ಲಿ ಬರಲು ನವೆಂಬರ್ 17 ರವರೆಗೆ ಗಡುವು ನೀಡಿದ್ದರೂ, ಪ್ರತಿಕ್ರಿಯೆ ನೀರಸವಾಗಿದೆ. ಜನರನ್ನು ಉತ್ತೇಜಿಸಲು ನಾವು ಅಧಿಸೂಚನೆಯ ವ್ಯಾಪಕ ಪ್ರಚಾರವನ್ನು ಯೋಜಿಸುತ್ತಿದ್ದೇವೆ. ಆದರೆ ಕೆಲವರು ಈ ವಿಷಯವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿದ್ದರಿಂದ, ನೋಂದಣಿ ಫಲಕಗಳನ್ನು ಸರಿಪಡಿಸಲು ಮೂಲ ಉಪಕರಣ ತಯಾರಕರಿಂದ (ಒಇಎಂ) ಅಧಿಕಾರ ಪಡೆದ ಎಚ್‌ಎಸ್‌ಆರ್‌ಪಿ ತಯಾರಕರಿಗೆ ಮಾತ್ರ ಅನುಮತಿ ನೀಡುವುದರ ವಿರುದ್ಧ ವಾದಿಸಿದ್ದರಿಂದ ಅದನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಹಾಗಾಗಿ ಸರ್ಕಾರವು ಪುನಃ ನಂಬರ್ ಪ್ಲೇಟ್ ಅಳವಡಿಕೆಯ ಗಡುವನ್ನು ವಿಸ್ತರಿಸಬಹುದು” ಎಂದು ಅಧಿಕಾರಿ ಹೇಳಿದ್ದಾರೆ.