ಬೆಂಗಳೂರಿನಲ್ಲಿ ನಡೆಯಲಿರುವ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದ 16ನೇ ಆವೃತ್ತಿಯು ಮಾ.1ರಿಂದ ಆರಂಭವಾಗಲಿದೆ. ಚಲನಚಿತ್ರೋತ್ಸವದಲ್ಲಿ 60 ದೇಶಗಳ ಸುಮಾರು 200 ಸಿನಿಮಾಗಳು ಪ್ರದರ್ಶನವಾಗಲಿವೆ. ಸಿನಿಮಾಸಕ್ತರು ಪಾಸ್ ಪಡೆಯಲು ನೋಂದಣಿ ಮಾಡಿಕೊಳ್ಳಬಹುದು. ಫೆಬ್ರವರಿ 12ರಿಂದ ನೋಂದಣಿ ಆರಂಭವಾಗಿದೆ ಎಂದು ಚಿತ್ರೋತ್ಸವ ಸಮಿತಿ ಅಧ್ಯಕ್ಷೆ ಬಿ.ಬಿ.ಕಾವೇರಿ ತಿಳಿಸಿದ್ದಾರೆ.
ಚಲನಚಿತ್ರೋತ್ಸವದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, “‘ಬೆಂಗಳೂರಿನಲ್ಲಿ ಜಗತ್ತು’ ಎಂಬ ಶೀರ್ಷಿಕೆಯಡಿ ಚಿತ್ಸೋತ್ಸವ ನಡೆಯಲಿದೆ. ರಾಜಾಜಿನಗರದ ಓರಾಯನ್ ಮಾಲ್‍ನ 11 ಸ್ಕ್ರೀನ್‍ಗಳಲ್ಲಿ ಸಾರ್ವಜನಿಕರಿಗೆ ಸಿನಿಮಾಗಳ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಚಿತ್ರೋತ್ಸವವು 7 ದಿನಗಳ ಕಾಲ ನಡೆಯಲಿದೆ. ಸಿನಿಮಾ ಆಸಕ್ತರು ಪಾಸ್ ಪಡೆದುಕೊಂಡು ಚಲನಚಿತ್ರೋತ್ಸವದಲ್ಲಿ ಭಾಗಿಯಾಗಬಹುದು. ಪಾಸ್‌ಗೆ ಸಾರ್ವಜನಿಕರಿಗೆ 800 ರೂ. ಹಾಗೂ ವಿದ್ಯಾರ್ಥಿ, ಹಿರಿಯ ನಾಗರಿಕರು, ಚಿತ್ರೋದ್ಯಮದ ಸದಸ್ಯರಿಗೆ 400 ರೂ. ಶುಲ್ಕವಿರಲಿದೆ. ಚಿತ್ರೋತ್ಸವದ ಜಾಲತಾಣದ ಮೂಲಕ ನೋಂದಾಯಿಸಿಕೊಳ್ಳಬಹುದು” ಎಂದು ತಿಳಿಸಿದ್ದಾರೆ.

“ಚಿತ್ರೋತ್ಸವದಲ್ಲಿ ಏಷಿಯನ್, ಇಂಡಿಯನ್ ಹಾಗೂ ಕನ್ನಡ ಚಲನಚಿತ್ರಗಳ ಸ್ಫರ್ಧಾ ವಿಭಾಗಗಳಿದ್ದು, ಮೂರು ವಿಭಾಗಗಳಲ್ಲಿ ತಲಾ ಮೂರು ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗುತ್ತದೆ” ಎಂದರು.
“ಚಿತ್ರೋತ್ಸವದಲ್ಲಿ ಎಐ ಕುರಿತ ವಿಶೇಷ ಕಾರ್ಯಾಗಾರ ಮಾ.3ರಂದು ನಡೆಯಲಿದೆ. ಹಿಂದೆ ಇದ್ದ ಟೆಂಟ್ ಸಿನಿಮಾ ರೀತಿಯಲ್ಲಿ ಕೆಲ ಸಿನಿಮಾಗಳ ಪ್ರದರ್ಶನ ನಡೆಯಲಿದೆ” ಎಂದು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ ತಿಳಿಸಿದ್ದಾರೆ.