ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡಾಗ ತಮ್ಮ ಹೆಸರು ಬಾಯಿಬಿಟ್ಟ ಎಂಬ ದ್ವೇಷದಿಂದ ಆರೋಪಿಗಳು ಅರ್ಬಾಜ್ ಎಂಬಾತನನ್ನು ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.
ಕಾಸೀಫ್, ಶಬ್ಬೀರ್, ಅರ್ಮಾನ್ ಹಾಗೂ ಶಫಿ ಬಂಧಿತ ಆರೋಪಿಗಳು. ಸೆ.22ರಂದು ಬೆಂಗಳೂರಿನ ಬಸವನಗುಡಿಯಲ್ಲಿ ಅರ್ಬಾಜ್ ಎಂಬಾತನನ್ನು ಕೊಲೆ ಮಾಡಲಾಗಿತ್ತು.
ಕೊಲೆಯಾದ ಅರ್ಬಾಜ್ ಮತ್ತು ಉಳಿದ ನಾಲ್ವರು ಆರೋಪಿಗಳು ಒಟ್ಟಿಗೆ ಸೇರಿ ಕಳ್ಳತನ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆಯಾದ ಅರ್ಬಾಜ್‌ನನ್ನು ಜಯನಗರ ಪೊಲೀಸರು ಬಂಧಿಸಿದ್ದರು. ಪೊಲೀಸ್ ವಿಚಾರಣೆ ವೇಳೆ, ಅರ್ಬಾಜ್ ಉಳಿದ ಆರೋಪಿಗಳ ಹೆಸರು ಬಾಯಿಬ್ಬಿಟ್ಟಿದ್ದನು. ಬಳಿಕ ಪೊಲೀಸರು ಉಳಿದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸೆ.29 ರಂದು ಮೈಸೂರು ರಸ್ತೆ-ಕೆಂಗೇರಿ ನಡುವೆ ಮೆಟ್ರೋ ಸಂಚಾರ ಸ್ಥಗಿತ
ಇದಕ್ಕೆ ಕೋಪಗೊಂಡಿದ್ದ ನಾಲ್ವರು ಅರ್ಬಾಜ್ ಜತೆಗೆ ಗಲಾಟೆ ಮಾಡಿಕೊಂಡಿದ್ದರು. ಅರ್ಬಾಜ್ ಜತೆಗೆ ಮಾತುಕತೆ ನಡೆಸಿದ್ದರು. ಈ ವೇಳೆ, ಅರ್ಬಾಜ್ ನಾಲ್ವರ ಮೇಲೂ ಹಲ್ಲೆ ಮಾಡಿದ್ದನಂತೆ, ಇದರಿಂದ ಕೋಪಗೊಂಡಿದ್ದ ಆರೋಪಿಗಳು ಅರ್ಬಾಜ್‌ನ ಹತ್ಯೆ ಮಾಡಲು ಉಪಾಯ ರೂಪಿಸಿದ್ದರು.
ಶುಕ್ರವಾರ (ಸೆ.22) ನಾಲ್ವರು ಆರೋಪಿಗಳು ಸೇರಿಕೊಂಡು ಬಸವನಗುಡಿ ಬಳಿ ಅರ್ಬಾಜ್ ಒಬ್ಬನೆ ಇದ್ದಾಗ ದಾಳಿ ಮಾಡಿ ಕೊಲೆ ಮಾಡಿದ್ದರು.