ಬೆಂಗಳೂರಿನ ವಿವಿಧ ವಾರ್ಡ್‌ಗಳಲ್ಲಿ ಬೇಸಿಗೆಯಲ್ಲಿ ಅಂತರ್ಜಲ ಕುಸಿಯುವ ಸಾಧ್ಯತೆ ಇದ್ದು, ಇದರಿಂದ ನೀರಿನ ಅಭಾವ ಎದುರಾಗಬಹುದು ಎಂದು ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದರಿಂದ ಬೆಂಗಳೂರು ಜಲ ಮಂಡಳಿ ಎಚ್ಚೆತ್ತುಕೊಂಡಿದ್ದು, ನೀರಿನ ದುರ್ಬಳಕೆ ತಡೆಗೆ ಮುಂದಾಗಿದೆ.
ರಾಜ್ಯದಲ್ಲಿ ಬೇಸಿಗೆ ಇನ್ನೂ ಆರಂಭವಾಗಿಲ್ಲ ಈಗಲೇ ಸುಡು ಬಿಸಿಲ ಧಗೆಗೆ ಜನ ಬಸವಳಿದು ಹೋಗುತ್ತಿದ್ದಾರೆ. ಅದರಲ್ಲಿ ಮಹಾನಗರ ಬೆಂಗಳೂರಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು ಮಧ್ಯಾಹ್ನದ ವೇಳೆ ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಬೆಂಗಳೂರಿನಲ್ಲಿ ನೀರಿನ ಬಳಕೆಯ ಮೇಲೆ ಮಿತಿ ಹೇರಬೇಕು? ಅಂತರ್ಜಲ ದುರ್ಬಳಕೆಯಾಗದಂತೆ ಹೇಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಜಲ ಮಂಡಳಿ ಸಾರ್ವಜನಿಕರು ಕುಡಿಯುವ ನೀರನ್ನು ಸಮರ್ಪಕವಾಗಿ ಬಳಸುವ ಹಾಗೂ ಪೋಲು ಮಾಡುವುದನ್ನು ತಪ್ಪಿಸಲು ದಂಡನಾತ್ಮಕ ಕ್ರಮಗಳಿಗೆ ಮುಂದಾಗಿದೆ. ಈ ಸಂಬಂಧ ಜಲ ಮಂಡಳಿ ಹೊಸ ಆದೇಶ ಹೊರಡಿಸಿದ್ದು, ಕುಡಿಯುವ ನೀರನ್ನು ವಾಹನಗಳನ್ನು ತೊಳೆಯಲು ,ಕೈದೋಟಕ್ಕೆ, ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ ಹಾಗೂ ನೆಲ ಸ್ವಚ್ಛತೆಗೆ ಬಳಸುವುದನ್ನು ನಿಷೇಧಿಸಿದೆ.
ಸಿನಿಮಾ ಮಂದಿರ ಮತ್ತು ಮಾಲ್‌ಗಳಲ್ಲಿ ಕುಡಿಯುವ ನೀರಿಗಲ್ಲದೇ, ಇತರೆ ಚಟುವಟಿಕೆಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಜಲಮಂಡಳಿ ಕಾಯ್ದೆಯ ಕಲಂ 109ರ ಅನ್ವಯ 500 ರೂ. ದಂಡ ವಿಧಿಸಲಾಗುವುದು. ಉಲ್ಲಂಘನೆ ಮರುಕಳಿಸಿದರೆ ದಂಡದ ಮೊತ್ತ 500 ರೂ.ಹಾಗೂ ಹೆಚ್ಚುವರಿಯಾಗಿ ಪ್ರತಿ ದಿನ 500 ರೂ. ದಂಡ ವಿಧಿಸುವುದಾಗಿ ಜಲ ಮಂಡಳಿ ಎಚ್ಚರಿಸಿದೆ.
ಆದೇಶ ಉಲ್ಲಂಘನೆ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಜಲಮಂಡಳಿಯ ಸಹಾಯವಾಣಿ 1916ಕ್ಕೆ ದೂರು ನೀಡಬಹುದು ಎಂದು ತಿಳಿಸಲಾಗಿದೆ.