ತನ್ನ ಪ್ರಿಯತಮೆ ಹಿಂದೆ ಬಿದ್ದಿದ್ದ ಸ್ನೇಹಿತನ ಮೇಲೆ ಪ್ರಿಯಕರ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ನಾಯಂಡಹಳ್ಳಿ ಸಮೀಪ ನಡೆದಿದೆ.
ಕಾರ್ತಿಕ್ ಹಲ್ಲೆಗೊಳಗಾದ ವ್ಯಕ್ತಿ. ಧನುಷ್ ಮತ್ತು ಆತನ ಸ್ನೇಹಿತ ಶಹಬುದ್ದೀನ್ ಆರೋಪಿಗಳು.
ಕಾರ್ತಿಕ್ ಹಾಗೂ ಧನುಷ್ ಇಬ್ಬರು ಒಂದೇ ಏರಿಯಾದ ಪರಿಚಯಸ್ಥರು. ಧನುಷ್ ಓರ್ವ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು. ಆತನ ಪ್ರಿಯತಮೆಯ ನಂಬರ್ ಪಡೆದ ಕಾರ್ತಿಕ್ ಯುವತಿಗೆ ಪದೇಪದೆ ಕರೆ ಮಾಡಿ ಹಿಂಸೆ ನೀಡುತ್ತಿದ್ದನು. ಅಲ್ಲದೇ, ಆಕೆ ಹೋದ ಕಡೆಗೆ ತೆರಳಿ ಹಿಂಸಿಸುತ್ತಿದ್ದನು ಎಂದು ಯುವತಿ ಆತನ ಪ್ರಿಯಕರನ ಬಳಿ ಹೇಳಿಕೊಂಡಿದ್ದಳು.
ಇದರಿಂದ ಕೋಪಗೊಂಡ ಧನುಷ್ ತನ್ನ ಸ್ನೇಹಿತ್ ಶಹಬುದ್ದೀನ್ ಜತೆಗೆ ಕಾರ್ತಿಕ್ ಮನೆಗೆ ತೆರಳಿ, ಮನೆಯಿಂದ ಸ್ವಲ್ಪ ದೂರ ಕರೆದುಕೊಂಡು ಹೋಗಿ ಆತನ ಮೇಲೆ ಚಾಕು ಇರಿದು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆ ಡಿಸೆಂಬರ್ 19ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ಜನವರಿ 2ರಿಂದ ಮತ್ತೆ ಕೋವಿಡ್ ವ್ಯಾಕ್ಸಿನ್ ಅಭಿಯಾನ ಆರಂಭ
ಹಲ್ಲೆಗೆ ಒಳಗಾದ ಕಾರ್ತಿಕ್ ತಾನೇ ಬೈಕ್‌ನಲ್ಲಿ ತೆರಳಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಧನುಷ್ ಹಾಗೂ ಶಹಬುದ್ದೀನ್ ಎಂಬುವವನ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಲೇಔಟ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.