ಕರ್ನಾಟಕ ವಕ್ಪ್ ಪರಿಷತ್‌ನ ಉಪಾಧ್ಯಕ್ಷರಾಗಿ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ, ಆದೇಶ ಹೊರಡಿಸಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಗಾದಿ ಪೈಪೋಟಿಯಲ್ಲಿ ಮೌಲಾನಾ ಶಾಫಿ ಸಅದಿ ಹೆಸರು ಮುಂಚೂಣಿಯಲ್ಲಿತ್ತು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಸಂಧಾನದಲ್ಲಿ ಶಾಫಿ ಸಅದಿಯವರಿಗೆ ಸೂಕ್ತ ಸ್ಥಾನಮಾನದ ಭರವಸೆ ನೀಡಿ ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾಗಿ ತೀರ್ಮಾನಿಸಲಾಗಿತ್ತು. ಕಳೆದ ಮೂರು ತಿಂಗಳಿಂದ ಶಾಫಿ ಸಅದಿ ಅಧಿಕಾರ ಸ್ವೀಕರಿಸದ ಕಾರಣ ಅನಿಶ್ಚಿತತೆಯಲ್ಲಿ ಮುಂದುವರೆದಿತ್ತು.
ಇದೀಗ ಅಲ್ಪಸಂಖ್ಯಾತ, ವಕ್ಫ್ ಸಚಿವರಾದ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ಮಾರ್ಗದರ್ಶನದಂತೆ ಮೌಲಾನಾ ಶಾಫಿ ಸಅದಿ ಅಧಿಕಾರ ಸ್ವೀಕರಿಸಲು ಮುಂದಾಗಿದ್ದು, ಸರ್ಕಾರದ ಆದೇಶವೂ ಹೊರಬಿದ್ದಿದೆ. ಸಾಮಾನ್ಯವಾಗಿ ವಕ್ಫ್ ಕೌನ್ಸಿಲ್ ವಕ್ಫ್ ಸಚಿವರು ಅಧ್ಯಕ್ಷರಾಗಿ ಸದಸ್ಯರು ಮಾತ್ರ ಆಯ್ಕೆ ಮಾಡುವ ವಾಡಿಕೆಯಾಗಿದೆ.

ಶಾಫಿ ಸಅದಿಗೆ ವಿಶೇಷ ಸ್ಥಾನವನ್ನು ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ನೇರವಾಗಿ ರಾಜ್ಯ ಆರ್ಥಿಕ ಇಲಾಖೆಯ ಅನುಮತಿ ಪಡೆದು ಹೊಸ ಸ್ಥಾನವನ್ನು ಕಲ್ಪಿಸಿ ವಕ್ಫ್ ಸಚಿವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಹೆಚ್ಚುವರಿ ಸ್ಥಾನವಾಗಿ ಕಲ್ಪಿಸಿ ಅಧಿಕಾರ ನೀಡಲಾಗಿದೆ.
ಕರ್ನಾಟಕ ವಕ್ಪ್ ಪರಿಷತ್ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಮೌಲಾನಾ ಶಾಫಿ ಸಅದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಪತ್ರ ನೀಡಿದರು. ಈ ವೇಳೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಜಮೀರ್ ಅಹಮದ್ ಖಾನ್, ಕೆ ಎಂ ಎಫ್ ಅಧ್ಯಕ್ಷ ಭೀಮಾ ನಾಯ್ಕ್ ಉಪಸ್ಥಿತರಿದ್ದರು.
ವಕ್ಪ್ ಪರಿಷತ್‌ನ ಕೆಲಸ ಏನು?
ಮುಸ್ಲಿಮರ ವಕ್ಫ್ ಆಸ್ತಿಗಳಲ್ಲಿ ವಾಣಿಜ್ಯ ಮಳಿಗೆಗಳು, ವಸತಿ ಕಟ್ಟಡಗಳು, ಸಮುದಾಯ ಭವನಗಳು, ಶಾದಿಮಹಲ್ ಗಳ ನಿರ್ಮಾಣಕ್ಕೆ ದೀರ್ಘಾವಧಿಯ ಸಾಲ ನೀಡುವುದರ ಮೂಲಕ ಅಭಿವೃದ್ದಿಗೆ ಬೆಂಬಲ ನೀಡುವುದು ವಕ್ಪ್ ಪರಿಷತ್‌ನ ಪ್ರಮುಖ ಕೆಲಸವಾಗಿದೆ.
ವಕ್ಫ್ ಮಂಡಳಿಯ ಅಡಿಯಲ್ಲಿ ನೋಂದಾಯಿತಗೊಂಡಿರುವ ಮಸೀದಿಗಳು, ದರ್ಗಾಗಳು ಸೇರಿದಂತೆ ಇತರೆ ಆಸ್ತಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಮೂಲಕ ಅನುದಾನದ ನೆರವನ್ನು ಸುತ್ತು ಬಂಡವಾಳದಂತೆ ಪರಿಷತ್ ನೀಡುತ್ತದೆ. ಈ ಬಂಡವಾಳಕ್ಕೆ ವಾರ್ಷಿಕ ಶೇ.6ರಷ್ಟು ಸರ್ವಿಸ್ ಚಾರ್ಜ್ ಅನ್ನು ವಕ್ಫ್ ಸಂಸ್ಥೆಗಳು ನೀಡಬೇಕಿದೆ. ಅಲ್ಲದೇ, ನೀಡಿದ್ದ ಅನುದಾನವು ಸದ್ಭಳಕೆ ಆಗಿದೆಯೇ ಇಲ್ಲವೇ, ಜೊತೆಗೆ ಗುಣಮಟ್ಟದ ಕೆಲಸ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲನೆ ನಡೆಸುವುದು ವಕ್ಪ್ ಪರಿಷತ್‌ನ ಜವಾಬ್ದಾರಿಯಾಗಿದೆ.
ವಕ್ಫ್ ಸಂಸ್ಥೆಗಳು ಪರಿಷತ್ತಿನ ಬೆಂಬಲ ಪಡೆದು ಅಭಿವೃದ್ದಿಪಡಿಸಿದ ಆಸ್ತಿಗಳಿಂದ ಬರುವ ಆದಾಯವನ್ನು ಸ್ಥಳೀಯ ನಿವಾಸಿಗಳ ಶಿಕ್ಷಣ, ಆರೋಗ್ಯ, ಅನಾಥಾಶ್ರಮಗಳು, ವಿದ್ಯಾರ್ಥಿವೇತನ, ಮತ್ತು ಇತರ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಧನಸಹಾಯ ನೀಡುವ ಕೆಲಸವನ್ನೂ ಮಾಡುತ್ತದೆ.
ಸದ್ಯ ಕರ್ನಾಟಕ ವಕ್ಪ್ ಪರಿಷತ್‌ಗೆ ಒಂಭತ್ತು ಮಂದಿಯನ್ನೊಳಗೊಂಡ ಆಡಳಿತ ಸಮಿತಿಯಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖೆಯ ಸಚಿವರು ಅಧ್ಯಕ್ಷರಾಗಿರುತ್ತಾರೆ. ಒಬ್ಬರು ಉಪಾಧ್ಯಕ್ಷರು ಮತ್ತು ಏಳು ಮಂದಿ ಸದಸ್ಯರು ಸೇರಿದಂತೆ ಒಟ್ಟು 9 ಮಂದಿ ಇರುತ್ತಾರೆ.
ಧನ್ಯವಾದ ಸಲ್ಲಿಸಿದ ಮೌಲಾನಾ ಶಾಫಿ ಸಅದಿ
ಕರ್ನಾಟಕ ವಕ್ಪ್ ಪರಿಷತ್ ಉಪಾಧ್ಯಕ್ಷರಾಗಿ ನೇಮಕ ಮಾಡಿರುವುದಕ್ಕೆ ಧನ್ಯವಾದ ಸಲ್ಲಿಸಿರುವ ಮೌಲಾನಾ ಶಾಫಿ ಸಅದಿ, “ಕಳೆದ ಫೆಬ್ರವರಿ ಪ್ರಾರಂಭದಲ್ಲಿ ಸಚಿವರಾದ ಬಿ ಝಡ್ ಜಮೀರ್ ಅಹಮದ್ ಖಾನ್ ವಕ್ಫ್ ಇಲಾಖೆಯ ಕೆಲಸ ಕಾರ್ಯಗಳು ಮತ್ತಷ್ಟು ಸುಸೂತ್ರವಾಗಿಸುವ ನಿಟ್ಟಿನಲ್ಲಿ ವಕ್ಫ್ ಕೌನ್ಸಿಲ್‌ನಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವಂತೆ ವಿನಂತಿಸಿದ್ದರು. ವೈಯಕ್ತಿಕ ಕಾರಣದಿಂದ ಅಧಿಕಾರ ಸ್ವೀಕರಿಸಲು ತಡವಾಗಿತ್ತು. ಇದೀಗ ರಾಜ್ಯ ಆರ್ಥಿಕ ಇಲಾಖೆಯಿಂದ ರಾಜ್ಯಪಾಲರಿಂದ ಅನುಮತಿ ಪಡೆದು ವಿಶೇಷ ಅಧಿಕಾರ ಕಲ್ಪಿಸಿ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಸ್ಥಾನವನ್ನು ಕಲ್ಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವರ ಸಮ್ಮುಖದಲ್ಲಿ ಅಧಿಕಾರ ನೀಡಿರುತ್ತಾರೆ. ಅವರ ಪ್ರೀತಿ ನಂಬಿಕೆ ವಿಶ್ವಾಸಕ್ಕೆ ಕೃತಙತೆಗಳು ಸಲ್ಲಿಸುತ್ತೇನೆ.” ಎಂದು ತಿಳಿಸಿದ್ದಾರೆ.
“ವಕ್ಫ್ ಕೌನ್ಸಿಲ್‌ನಲ್ಲಿ ಅಧಿಕಾರ ಪರಧಿಯೊಳಗೆ ವಕ್ಫ್ ಸಚಿವರು ಕಾರ್ಯಚಟುವಟಿಕೆಗಳಿಗೆ ಬೆನ್ನೆಲುಬಾಗಿ ಸಮುದಾಯದ ಸಮಾಜದ ಏಳಿಗೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯಾಚರಿಸಲು ನನ್ನಿಂದಾದ ಎಲ್ಲ ಪ್ರಯತ್ನಗಳು ಮಾಡಲು ಕಠಿಬದ್ಧನಾಗಿರುವೆ. ಎಲ್ಲ ಯಶಸ್ವಿಯ ಹಿಂದೆ ಇರುವ ಪ್ರೀತಿ ಪಾತ್ರರು , ಗೆಳೆಯರು, ಗುರು ಹಿರಿಯರು, ತಂದೆ ತಾಯಿ ಎಲ್ಲರನ್ನೂ ಸ್ಮರಿಸುತ್ತೇನೆ” ಎಂದು ಶಾಫಿ ಸಅದಿ ತಿಳಿಸಿದ್ದಾರೆ.
