ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆಗೆ ನಮ್ಮ ಮೆಟ್ರೋ ಮದ್ದಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಬೆಂಗಳೂರಿನ ನಾಲ್ಕು ದಿಕ್ಕೂಗಳಿಗೂ ಮೆಟ್ರೋ ಸಂಚಾರ ಲಭ್ಯವಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮೆಟ್ರೋ ವ್ಯಾಪ್ತಿಯನ್ನು ವಿಸ್ತರಣೆ ಮಾಡುತ್ತಿದ್ದು, ನಾಗಸಂದ್ರದಿಂದ ಮಾದಾವರದವರೆಗೆ 3.3 ಕಿ.ಮೀ ಉದ್ದದ ಹಸಿರು ಮಾರ್ಗದ ಮೆಟ್ರೊ ಜುಲೈ ವೇಳೆಗೆ ಸಾರ್ವಜನಿಕ ಕಾರ್ಯಾಚರಣೆಗೆ ಮುಕ್ತವಾಗುವ ಸಾಧ್ಯತೆಯಿದೆ.
ನಾಗಸಂದ್ರದಿಂದ ಮಾದಾವರದವರೆಗೆ 3.3 ಕಿ.ಮೀ ಉದ್ದದ ಹಸಿರು ಮಾರ್ಗದ ಮೆಟ್ರೊ ಜುಲೈ ವೇಳೆಗೆ ಸಾರ್ವಜನಿಕ ಕಾರ್ಯಾಚರಣೆಗೆ ಮುಕ್ತವಾಗುವ ಸಾಧ್ಯತೆಯಿದ್ದು, ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
₹298 ಕೋಟಿ ವೆಚ್ಚದ ಮೆಟ್ರೋ ಮಾರ್ಗವು ನಾಗಸಂದ್ರದ ಆಚೆಗೆ ಮಂಜುನಾಥ್ ನಗರ, ಚಿಕ್ಕಬಿದರಕಲ್ಲು ಹಾಗೂ ಮಾದಾವರ ನಿಲ್ದಾಣಗಳನ್ನು ಒಳಗೊಂಡಿದೆ.
ನಾಗಸಂದ್ರದಿಂದ ಮಾದಾವರವರೆಗಿನ (ಬಿಐಇಸಿ) ರೀಚ್–3 ಕಾಮಗಾರಿಗೆ 2017ರ ಮೇ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ಭೂಸ್ವಾಧೀನ ಮತ್ತು ಕಾಮಗಾರಿಗೆ ₹964 ಕೋಟಿ ಮೀಸಲಿಡಲಾಗಿತ್ತು. ಭೂಸ್ವಾಧೀನ ಪ್ರಕ್ರಿಯೆ ಕಗ್ಗಂಟಾಗಿ ಪರಿಣಮಿಸಿತ್ತು. ಹೈಕೋರ್ಟ್‌ನಲ್ಲಿ ವ್ಯಾಜ್ಯ ಇತ್ಯರ್ಥವಾಗಲು ಸುಮಾರು ನಾಲ್ಕು ವರ್ಷಗಳು ಬೇಕಾದವು. ಆನಂತರ ಕಾಮಗಾರಿ ಚುರುಕುಗೊಂಡಿತು. ಮಂಜುನಾಥನಗರ, ಚಿಕ್ಕಬಿದರಕಲ್ಲು (ಜಿಂದಾಲ್) ಮೆಟ್ರೊ ನಿಲ್ದಾಣಗಳ ಕಾಮಗಾರಿ ಮುಕ್ತಾಯಗೊಂಡಿವೆ.
ತುಮಕೂರು ರಸ್ತೆಯಲ್ಲಿ ವಿಪರೀತ ವಾಹನ ದಟ್ಟಣೆ ಉಂಟಾಗಿದೆ. ನೆಲಮಂಗಲ ಕಡೆಯಿಂದ ಪೀಣ್ಯ ಕೈಗಾರಿಕಾ ವಲಯ ಸಹಿತ ಬೆಂಗಳೂರಿನ ನಾನಾ ಕಡೆಗೆ ಬರುವ ಕಾರ್ಮಿಕರು, ಉದ್ಯೋಗಿಗಳು ನಾಗಸಂದ್ರದವರೆಗೆ ಬಂದು ಮೆಟ್ರೊ ರೈಲು ಹತ್ತುತ್ತಿದ್ದಾರೆ. ಮಾದಾವರವರೆಗೆ ಮೆಟ್ರೊ ಪ್ರಾರಂಭವಾದರೆ, 3 ಕಿ.ಮೀ. ಮೊದಲೇ ಮೆಟ್ರೊ ಸೇವೆ ಅವರಿಗೆ ಲಭ್ಯವಾಗಲಿದೆ. ವಾಹನ ದಟ್ಟಣೆ ಕಡಿಮೆಯಾಗಲಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜ.16ರಿಂದ 19ರ ವರೆಗೆ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಬಂದ್
“ಈಗಾಗಲೇ, ಮೆಟ್ರೋ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಸದ್ಯಕ್ಕೀಗ ಪ್ರಕ್ರಿಯೆಯಲ್ಲಿ ಪೂರ್ಣಗೊಳಿಸುವ ಕೆಲಸ ಮಾತ್ರ ಬಾಕಿಯಿವೆ. ಇನ್ನು ಟ್ರ್ಯಾಕ್ ಹಾಕುವ ಕಾಮಗಾರಿ ಪೂರ್ಣಗೊಳ್ಳಲು 2.5 ತಿಂಗಳು ಬೇಕಾಗಲಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ ರೈಲುಗಳ ಪ್ರಾಯೋಗಿಕ ಓಡಾಟ ನಡೆಯಲಿದ್ದು, ಜುಲೈ ವೇಳೆಗೆ ಮೆಟ್ರೋ ಕಾರ್ಯಾಚರಣೆ ನಡೆಸಲಿದೆ” ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.