- ತಪ್ಪೆಸಗಿದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರ ಒತ್ತಾಯ
- ಬಸ್ ಚಾಲಕನ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ವೇಳೆ ಬಿಡದಿಯ ಕಣಿಮಿಣಿಕೆ ಟೋಲ್ ಪ್ಲಾಜಾ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ಟಿಸಿ)ದ ಬಸ್ ಅತಿವೇಗ ಮತ್ತು ಅಜಾಗರೂಕತೆಯಿಂದ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಇತರ ಚಾಲಕರಲ್ಲಿ ಭಯ ಹುಟ್ಟಿಸಿದ ಘಟನೆ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಡದಿ ಹೋಬಳಿ ಹನುಮಂತನಗರದ ಕೋತಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕೆಎಸ್ಆರ್ಟಿಸಿ ಬಸ್ ಸಂಖ್ಯೆ ಕೆಎ10 ಎಫ್ 0492ರ ಚಾಲಕ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಚಲಿಸುತ್ತಿರುವ ವಿಡಿಯೊವನ್ನು ಟ್ವಿಟರ್ನಲ್ಲಿ ಅಭಿಷೇಕ್ ಎಂಬುವವರು ಅಪ್ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ತಪ್ಪೆಸಗಿದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರು ಒತ್ತಾಯಿಸಿದ್ದಾರೆ. ಈ ಪೋಸ್ಟ್ ಆಧರಿಸಿ ಬಸ್ ಚಾಲಕನ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 14 ರಂದು ಬೆಳಗ್ಗೆ 10.41 ಗಂಟೆಗೆ ಕೆಎಸ್ಆರ್ಟಿಸಿ ಬಸ್ ಚಾಲಕರೊಬ್ಬರು ಹನುಮಂತನಗರ ರಸ್ತೆಯ ಬಿಡದಿ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಿಂದ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇಯಲ್ಲಿ ಮೈಸೂರು ಕಡೆಗೆ ಬಸ್ ಅನ್ನು ಎದುರು ದಿಕ್ಕಿನಿಂದ ಚಲಾಯಿಸುತ್ತಿದ್ದರು. ಈ ವೇಳೆ ಬೆಂಗಳೂರು ಕಡೆಗೆ ತೆರಳುತ್ತಿದ್ದ ವಾಹನಗಳ ಮುಂದೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿರುವುದು ವಿಡಿಯೊದಿಂದ ದೃಢಪಟ್ಟಿದೆ.
ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಾಕಿರುವ ಅಭಿಷೇಕ್ ಭಾರದ್ವಾಜ್ ಎಂಬವರು, ರಸ್ತೆಯ ನಿಯಮಗಳನ್ನು ಮುರಿಯಲು ಸರ್ಕಾರಿ ವಾಹನಗಳಿಗೆ ಅನುಮತಿಸಲಾಗಿದೆಯೇ? ಅಪಘಾತಗಳಿಗೆ ಎಕ್ಸ್ಪ್ರೆಸ್ ವೇಯನ್ನು ದೂರಬಹುದೇ? ಎಂದು ಪ್ರಶ್ನಿಸಿ, ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ವಿಡಿಯೋ ಟ್ಯಾಗ್ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳು; ಶೌಚಾಲಯದಲ್ಲಿ ಅವಿತು ಕುಳಿತ ವೈದ್ಯ
ಎಕ್ಸ್ಪ್ರೆಸ್ ವೇಯಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಕಾನೂನು ಬಾಹಿರವಾಗಿದ್ದು, ಇತರೆ ವಾಹನಗಳ ಚಾಲಕರಿಗೆ ಭಯ ಹುಟ್ಟಿಸಿ ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ. ಚಾಮರಾಜನಗರ ಡಿಪೋಗೆ ಸೇರಿದ ಬಸ್ ಬೆಂಗಳೂರಿನಿಂದ ಮಾದೇಶ್ವರ ಬೆಟ್ಟಕ್ಕೆ ಹೊರಟಿರುವುದು ತಿಳಿದುಬಂದಿದೆ.
ಡಿಪೋ ಮ್ಯಾನೇಜರ್ಗೆ ವಿಷಯ ತಿಳಿಸಿದ್ದು, ಚಾಲಕನ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಲಾಗಿದೆ. ಸದ್ಯದಲ್ಲೇ ಬಸ್ ವಶಕ್ಕೆ ಪಡೆಯಲಾಗುವುದು ಎಂದು ಬಿಡದಿ ಪೊಲೀಸರು ತಿಳಿಸಿದ್ದಾರೆ.