ಹಳೆ ದ್ವೇಷದ ಹಿನ್ನೆಲೆ, ರೌಡಿಶೀಟರ್‌ವೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಲಕ್ಕಸಂದ್ರ ಬಳಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮನೆಯ ಸಮೀಪದಲ್ಲೇ ನಡೆದಿದೆ.
ಜಯಪ್ರಕಾಶ್ ಅಲಿಯಾಸ್ ನಾಯಿ ಅಪ್ಪಿ ಹತ್ಯೆಯಾದ ರೌಡಿಶೀಟರ್. ಡಿ.24ರ ಸಾಯಂಕಾಲ ಸುಮಾರು ಏಳು ಗಂಟೆಗೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹನುಮ ಜಯಂತಿ ಹಿನ್ನೆಲೆ, ಲಕ್ಕಸಂದ್ರ ಬಸ್ ನಿಲ್ದಾಣ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಅನ್ನದಾನ ಕಾರ್ಯಕ್ರಮ ನಡೆಯುತ್ತಿತ್ತು. ಮೃತ ರೌಡಿಶೀಟರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನು.
ಈ ವೇಳೆ, ಕೆಲ ಹೊತ್ತು ರೌಡಿಶೀಟರ್‌ನನ್ನು ಗಮನಿಸಿದ ನಾಲ್ಕೈದು ಆರೋಪಿಗಳು ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಆರಂಭಿಸಿದ್ದಾರೆ. ಅವರಿಂದ ತಪ್ಪಿಸಿಕ್ಕೊಳ್ಳಲು ರೌಡಿಶೀಟರ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಏಳು ಗಂಟೆ ಸುಮಾರಿಗೆ ಆರೋಪಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ರೌಡಿಶೀಟರ್ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದಾರೆ.
ಆರೋಪಿಗಳಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ರೌಡಿಶೀಟರ್ ಸಮೀಪದಲ್ಲಿದ್ದ ವಿಜಯ ಸಾಗರ ಹೋಟೆಲ್‌ಗೆ ನುಗ್ಗಿದ್ದಾನೆ. ಆದರೂ ಬಿಡದ ಆರೋಪಿಗಳು ಹೋಟೆಲ್‌ನಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಆಡುಗೋಡಿ ಪೊಲೀಸರು, ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗಾಂಜಾ ಇಡುತ್ತೇನೆ ಎಂದು ಹೆದರಿಸಿ ದಂಪತಿಯಿಂದ ₹150 ಲಕ್ಷ ಹಣ ವಸೂಲಿ ಮಾಡಿದ ನಕಲಿ ಪೊಲೀಸ್
ಹಳೆ ವೈಷಮ್ಯ ಹಿನ್ನೆಲೆ ಕೊಲೆ ಶಂಕೆ
“ಹಳೆ ವೈಷಮ್ಯದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯ ಮೇಲೆ 2005-2006ರಲ್ಲಿ ಕೊಲೆ ಆರೋಪದ ಕೇಸ್‌ಗಳಿದ್ದು, ಇದಾದ ನಂತರ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದನು ಎಂದು ತಿಳಿದುಬಂದಿದೆ. ನಂತರ ಅಪರಾಧ ಕೃತ್ಯಗಳಲ್ಲಿ ಸಕ್ರಿಯವಾಗಿದ್ದುದರ ಕುರಿತು ಮಾಹಿತಿ ಇಲ್ಲ. ಐದು ತಂಡ ರಚಿಸಿ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ” ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬ ಹೇಳಿದ್ದಾರೆ.