- ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲು
- ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದ ಆರೋಪಿ
ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಅರೆ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಶನಿವಾರ ಬಂಧಿಸಿ, ಅವರಿಂದ ₹20 ಲಕ್ಷ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಕೇರಳ ಮೂಲದ 23 ವರ್ಷದ ಬೆಸ್ಟಿನ್ ರಾಯ್ ಬಂಧಿತ ವ್ಯಕ್ತಿ. ಈತ ನಗರದ ಕೆಂಗೇರಿ ಬಳಿಯ ಕಾಲೇಜ್ವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಕೆಂಗೇರಿಯಲ್ಲಿ ಅಪಾರ್ಟ್ಮೆಂಟ್ವೊಂದನ್ನು ಬಾಡಿಗೆಗೆ ಪಡೆದು ನೆಲೆಸಿದ್ದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಆರೋಪಿ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಮಾದಕ ದ್ರವ್ಯಗಳನ್ನು ಮಾರಾಟ ಮಾಡಿದ್ದಾನೆ. ನಿಯಮಿತವಾಗಿ ಡ್ರಗ್ಸ್ ಸರಬರಾಜು ಮಾಡುವ ಜಾಲವನ್ನು ನಿರ್ಮಾಣ ಮಾಡಿಕೊಂಡಿದ್ದಾನೆ. ನಗರದ ಹಲವು ಕಾಲೇಜುಗಳ ಸುತ್ತ ಸುಳಿದಾಡುತ್ತಾ ಡ್ರಗ್ಸ್ ಮಾರಾಟ ಮಾಡಲು ಪ್ರಾರಂಭಿಸಿದ್ದಾನೆ. ಬಂಧಿತ ರಾಯ್ ಕೂಡ ಮಾದಕ ವ್ಯಸನಿಯಾಗಿದ್ದು, ವಿದ್ಯಾರ್ಥಿಗಳಿಗೆ ಮಾರಾಟಕ್ಕಾಗಿ ನಿಷಿದ್ಧ ವಸ್ತುಗಳನ್ನು ಸಂಗ್ರಹಿಸಿದ್ದಾನೆ. ಈತನನ್ನು ಮೊದಲ ಬಾರಿಗೆ ಬಂಧಿಸಲಾಗಿದೆ. ಈತನು ಎಲ್ಲಿಂದ ಮಾದಕ ವಸ್ತುಗಳನ್ನು ಪಡೆಯುತ್ತಿದ್ದಾನೆ ಎಂಬ ಬಗ್ಗೆ ಮಾಹಿತಿ ಪತ್ತೆಯಾಗಿಲ್ಲ” ಎಂದು ಪೊಲೀಸರು ಹೇಳಿದ್ದಾರೆ.
ಬಸವನಗುಡಿ ಪೊಲೀಸರು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (ಎನ್ಡಿಪಿಎಸ್) ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪಾದಚಾರಿ ಮಹಿಳೆ ಮೇಲೆ ಹರಿದ ಬಿಬಿಎಂಪಿ ಕಸದ ಲಾರಿ : ಸಾವು
ಕೊಕೇನ್ ದಂಧೆಕೋರರ ಮೇಲೆ ಸಿಸಿಬಿ ಕ್ರಮ
ಬೆಂಗಳೂರಿನ ಕಾಡುಗೋಡಿಯಲ್ಲಿ ಕೊಕೇನ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ದಕ್ಷಿಣ ಆಫ್ರಿಕಾದ ಪ್ರಜೆಯೊಬ್ಬನನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿ ನಿವಾಸಿ ಮಾರ್ಕ್ ಎಂಬುವರಿಂದ ₹1 ಲಕ್ಷ ಮೌಲ್ಯದ 70 ಗ್ರಾಂ ಕೊಕೇನ್ ಹಾಗೂ ಸ್ಕೂಟರ್ ಜಪ್ತಿ ಮಾಡಿದ್ದಾರೆ. ಮಾರ್ಕ್ ಬ್ಯುಸಿನೆಸ್ ವೀಸಾದ ಮೇಲೆ ಬೆಂಗಳೂರಿನಲ್ಲಿದ್ದರು. ತ್ವರಿತವಾಗಿ ಹಣ ಗಳಿಸಲು ಡ್ರಗ್ಸ್ ಮಾರಾಟ ಮಾಡುತ್ತಿದ್ದರು.
ಕಾಡುಗೋಡಿ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮಾರ್ಕ್ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಡ್ರಗ್ಸ್ ಸಂಗ್ರಹಿಸಲು ಡಿಕ್ಷನರಿಯಂತೆ ಕಾಣುವಂತೆ ಮಾರ್ಪಡಿಸಿದ ಲಾಕರ್ ಅನ್ನು ಬಳಸುತ್ತಿದ್ದರು. ಕೊಕೇನ್ ಸಂಗ್ರಹಿಸುವ ಸಣ್ಣ ಜಾಲವನ್ನು ಅಭಿವೃದ್ಧಿಪಡಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (ಎನ್ಡಿಪಿಎಸ್) ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.