- ಉತ್ತರ ಬೆಂಗಳೂರಿನ ಶ್ರೀನಿವಾಸಪುರದ ಕೋಗಿಲು ಮುಖ್ಯರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ
- ಸರಸ್ವತಿ ಬಿಜೆಪಿಯ ಸಕ್ರಿಯ ಕಾರ್ಯಕರ್ತೆಯಾಗಿದ್ದು, ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು
ಬೆಂಗಳೂರಿನ ಶ್ರೀನಿವಾಸಪುರದಲ್ಲಿ ಮಹಿಳೆಯೊಬ್ಬರು ನೀರಿನ ಕೊರತೆಯಿಂದಾಗಿ ನೆರೆಹೊರೆಯವರೊಂದಿಗೆ ಜಗಳವಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸರಸ್ವತಿ ಕೆ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸರಸ್ವತಿ ಬಿಜೆಪಿಯ ಸಕ್ರಿಯ ಕಾರ್ಯಕರ್ತೆಯಾಗಿದ್ದು, ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇವರ ಪತಿ ನಾಗರಾಜ ಎ ವಿ, ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಸಹಾಯಕ ಕ್ಯಾಮರಾಮನ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಉತ್ತರ ಬೆಂಗಳೂರಿನ ಶ್ರೀನಿವಾಸಪುರದ ಕೋಗಿಲು ಮುಖ್ಯರಸ್ತೆಯಲ್ಲಿ ಏ.21 ರಂದು ಸಂಜೆ 5.15 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಏನಿದು ಹಿನ್ನೆಲೆ?
“ನೀರಿನ ವಿಚಾರವಾಗಿ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯ ನೆರೆಹೊರೆಯವರಾದ ಶ್ರೀನಿವಾಸ್ ಮತ್ತು ಭವಾನಿ ಅವರು ಕಾರ್ಪೊರೇಷನ್ ನೀರನ್ನು ಪಂಪ್ ಮಾಡುವ ಬಗ್ಗೆ ತಮ್ಮೊಂದಿಗೆ ಹಾಗೂ ಅಪಾರ್ಟ್‌ಮೆಂಟ್‌ನ ಇತರ ನಿವಾಸಿಗಳೊಂದಿಗೆ ಜಗಳವಾಡುತ್ತಿದ್ದರು. ಉಳಿದವರಿಗೆ ನೀರು ಬಿಡದೆ ತಮ್ಮ ಮನೆಗೆ ನೀರನ್ನೆಲ್ಲ ಪಂಪ್ ಮಾಡುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಇತ್ತೀಚೆಗೆ ಅಪಾರ್ಟ್‌ಮೆಂಟ್‌ನವರು ಎಲ್ಲರೂ ಸೇರಿ ಸಭೆ ನಡೆಸಿ ಎಲ್ಲರೂ ಸಮಾನವಾಗಿ ನೀರು ಪಡೆಯಬೇಕು ಎಂದು ತೀರ್ಮಾನಿಸಿದ್ದೆವು. ಆದರೆ, ನೆರೆಯ ದಂಪತಿ ಸರಸ್ವತಿಗೆ ನೀರು ಪಂಪ್ ಮಾಡಲು ಬಿಡಲಿಲ್ಲ” ಎಂದು ನಾಗರಾಜ ತಿಳಿಸಿದ್ದಾರೆ.
“ಈ ಬಗ್ಗೆ ಸರಸ್ವತಿ ಅವರನ್ನು ಕೇಳಿದ್ದಕ್ಕೆ ನೆರೆಯ ದಂಪತಿ ಅವಳನ್ನು ಹಲವರ ಮುಂದೆ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನೆರೆಯ ದಂಪತಿಯೊಂದಿಗೆ ಮತ್ತೊಬ್ಬ ನೆರೆಮನೆಯ ಶಿಲ್ಪಾ ಕೂಡ ಕೈಜೋಡಿಸಿದ್ದಾರೆ. ಸಿನಿಮಾ ಚಿತ್ರೀಕರಣ ಮುಗಿಸಿ ಧಾರವಾಡದಿಂದ ವಾಪಸ್ಸಾಗುತ್ತಿದ್ದ ವೇಳೆ ಮಧ್ಯಾಹ್ನ 3.30ರ ಸುಮಾರಿಗೆ ಪತ್ನಿ ಕರೆ ಮಾಡಿ, ಘಟನೆ ನಡೆದ ಬಗ್ಗೆ ತಿಳಿಸಿದ್ದಾಳೆ. ಕೂಡಲೇ ನಾನು ಈ ಬಗ್ಗೆ ಯಲಹಂಕ ಪೊಲೀಸರಿಗೆ ತಿಳಿಸಿದ್ದೇನೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಬಿಎಂಪಿಯಿಂದ ಮರಗಳ ಸುತ್ತ ಕಾಂಕ್ರೀಟ್; ಕೆರೆ ಹೋರಾಟಗಾರರ ಆಕ್ರೋಶ
“ನಾನು ನನ್ನ ಪತ್ನಿಗೆ ಅವರೊಂದಿಗೆ ಜಗಳವಾಡಬೇಡ. ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡುತ್ತೇನೆ ಎಂದು ಹೇಳಿದೆ. ಪೊಲೀಸರು ಬರುವವರೆಗೂ ಮನೆಯಲ್ಲಿಯೇ ಇರುವಂತೆ ಕೇಳಿಕೊಂಡೆ. ಆದರೆ, ನೆರೆಯ ದಂಪತಿ ಮತ್ತೆ ನನ್ನ ಪತ್ನಿಯೊಂದಿಗೆ ಜಗಳವಾಡಿ ಥಳಿಸಿದ್ದಾರೆ. 112ಕ್ಕೆ ಕರೆ ಮಾಡಿ ದೂರು ನೀಡಿದ್ದೆ. ಸ್ವಲ್ಪ ಸಮಯದ ನಂತರ, ನನ್ನ ನೆರೆಹೊರೆಯವರು ನನಗೆ ಕರೆ ಮಾಡಿ, ತುರ್ತು ಪರಿಸ್ಥಿತಿ ಇರುವುದರಿಂದ ತಕ್ಷಣ ಮನೆಗೆ ಬರುವಂತೆ ಹೇಳಿದರು. ನಾನು ಸಂಜೆ 7.30ರ ನಂತರ ಮನೆಗೆ ತಲುಪಿದೆ” ಎಂದು ವಿವರಿಸಿದ್ದಾರೆ.
ಮಗಳನ್ನು ಮನೆಯಿಂದ ಹೊರಗೆ ಕಳುಹಿಸಿದ ನಂತರ ಸರಸ್ವತಿ ನೇಣು ಬಿಗಿದುಕೊಂಡಿದ್ದಾಳೆ. ಸರಸ್ವತಿ ಆತ್ನಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಮತ್ತು ಅವಳನ್ನು ರಕ್ಷಿಸಲು ನೆರೆಹೊರೆಯವರು ಬಾಗಿಲು ಮುರಿದು, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ. ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಮೂವರ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.