ವಿಜ್ಞಾನಿಯ ಕಾರಿಗೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹೊರವಲಯದ ರಾವುತನಹಳ್ಳಿ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಆಗಸ್ಟ್ 24ರಂದು ರಾತ್ರಿ 12:45ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರನ್ನು ಐವರ ತಂಡ ಮಾರಕಾಸ್ತ್ರಗಳನ್ನು ಹಿಡಿದು ನಿಲ್ಲಿಸಲು ಪ್ರಯತ್ನಿಸಿದರು. ಅವರು ನಿಲ್ಲಿಸದಿದ್ದಾಗ ಬೈಕ್‌ಗಳಲ್ಲಿ ಕಾರನ್ನು ಹಿಂಬಾಲಿಸಿ, ಕಲ್ಲೆಸೆದು ಗಾಜು ಒಡೆದು ಹಾಕಿದ್ದರು.
ದರೋಡೆ ಮಾಡಲು ಐವರ ತಂಡ ವಿಜ್ಞಾನಿಯ ಕಾರನ್ನು ಬೈಕ್‌ನಲ್ಲಿ ಹಿಂಬಾಲಿಸಿತ್ತು. ಕಾರಿನ ಹಿಂಬದಿಯ ಗಾಜಿಗೆ ಕಲ್ಲೆಸಿದಿದ್ದರು. ಜತೆಗೆ ವಿಜ್ಞಾನಿಯ ಮೇಲೆ ಹಲ್ಲೆ ಮಾಡಲು ಪ್ರಯತ್ನ ಮಾಡಲಾಗಿತ್ತು.
ಈ ಬಗ್ಗೆ ವಿಜ್ಞಾನಿ ಅಶುತೋಷ್ ಮಾದನಾಯಕನಹಳ್ಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
“ಆರೋಪಿಗಳಾದ ಮೈಲಾರಿ (22), ನವೀನ್ (22) ಹಾಗೂ ಶಿವರಾಜ್ (30) ಬಂಧಿತರು. ಇವರನ್ನು ಸೋಮವಾರ ರಾತ್ರಿ ರಾವುತನಹಳ್ಳಿ ಬಳಿ ದರೋಡೆಗೆ ಯೋಜಿಸುತ್ತಿದ್ದಾಗ ಬಂಧಿಸಲಾಗಿದೆ. ಇವರಿಂದ ಶಸ್ತ್ರಾಸ್ತ್ರ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಸೋಮ ಅಲಿಯಾಸ್ ಸೋನು ಮತ್ತು ಕೀರ್ತಿ ಅಲಿಯಾಸ್ ಉಮೇಶ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮೂವರು ಬಂಧಿತರ ವಿಚಾರಣೆ ನಡೆಸಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 2030ಕ್ಕೆ ಕೆಐಎನಲ್ಲಿ ಮೂರನೇ ಟರ್ಮಿನಲ್!
ದೂರು ದಾಖಲಿಸುವ ಮೊದಲು ವಿಜ್ಞಾನಿ ಸಿಂಗ್ ಅವರು ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಜತೆಗೆ ಹಾನಿಗೊಳಗಾದ ಕಾರಿನ ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು.