ನೆಲಮಂಗಲದ ಕಿತ್ತನಹಳ್ಳಿಯ ವಿಭಾ ಇಂಟರ್‌ನ್ಯಾಷನಲ್ ಶಾಲಾ ಮಾಲೀಕ ಈರತ್ತಯ್ಯನ ಕಾಮಚೇಷ್ಟೆ ಬಟಾಬಯಲಾಗಿದೆ. ವಿದ್ಯಾರ್ಥಿನಿಯರನ್ನು ತನ್ನ ಕ್ಯಾಬಿನ್‌ಗೆ ಕರೆಯಿಸಿಕೊಂಡು ಅವರ ಅಂಗಾಂಗ ಮುಟ್ಟಿ, ವಿಕೃತವಾಗಿ ವರ್ಣಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಖಾಸಗಿ ಶಾಲೆಯ ಕಾಮುಕ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನ ನೆಲಮಂಗಲದ ಕಿತ್ತನಹಳ್ಳಿಯಲ್ಲಿರುವ ವಿಭಾ ಇಂಟರ್‌ನ್ಯಾಷನಲ್ ಸ್ಕೂಲ್‌ನ ಮಾಲೀಕ ಈರತ್ತಯ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿಯರು ಆತನ ವಿರುದ್ಧ ದೂರು ನೀಡಿದ್ದು, ಆತನ ವಿಕೃತಿಯನ್ನು ಬಿಚ್ಚಿಟ್ಟಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ.
ಆರೋಪಿ ಈರತ್ತಯ್ಯ ತನ್ನ ಕ್ಯಾಬಿನ್‌ಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಳ್ಳುತ್ತಿದ್ದರು. ಅವರ ಖಾಸಗಿ ಅಂಗಗಳನ್ನು ಸ್ಪರ್ಶಿಸಿ, ವಿಕೃತವಾಗಿ ನಡೆದುಕೊಳ್ಳುತ್ತಿದ್ದರು. ಅಲ್ಲದೆ, ವಿದ್ಯಾರ್ಥಿನಿಯರ ಅಂಗಗಳನ್ನು ಅಸಹ್ಯವಾಗಿ ಹಣ್ಣುಗಳಿಗೆ ಹೋಲಿಕೆ ಮಾಡುತ್ತಿದ್ದ ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ವಿವರಿಸಿದ್ದಾರೆ.
ದೂರು ನೀಡಿರುವ ವಿದ್ಯಾರ್ಥಿನಿಯರಲ್ಲಿ ಓರ್ವ ವಿದ್ಯಾರ್ಥಿನಿ ತನಗೆ ಈರತ್ತಯ್ಯ ನೀಡಿದ ಲೈಂಗಿಕ ಕಿರುಕುಳದ ಬಗ್ಗೆ ವಿವರಿಸಿದ್ದಾರೆ. “ಕಾಮುಕ ಈರತ್ತಯ್ಯ ಆತನ ಕ್ಯಾಬಿನ್‌ಗೆ ನನ್ನನ್ನು ಕರೆಸಿಕೊಂಡು, ಮುತ್ತು ಕೊಟ್ಟಿದ್ದಾನೆ. ಋತುಚಕ್ರ (ಮುಟ್ಟು) ಹಾಗೂ ದೇಹದ ಅಂಗಾಂಗಗಳ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದಾನೆ. ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ, ಶೈಕ್ಷಣಿಕ ಭವಿಷ್ಯವನ್ನೇ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ” ಎಂದು ವಿವರಿಸಿದ್ದಾರೆ.