ʼಪ್ರಸ್ತುತ ಕಾಲದ ವಿದ್ಯಾರ್ಥಿಗಳು ಕನ್ನಡದ ಕಥೆ-ಕಾದಂಬರಿಗಳನ್ನು ಓದುವುದನ್ನು ಮೈಗೂಡಿಸಿಕೊಂಡರೆ ಸಾಕು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬಹುದುʼ ಎಂದು ಮಾಜಿ ಸಚಿವ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಕರ್ನಾಟಕ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಮಾಹಿತಿ ಯುಗದಲ್ಲಿ ಯುವಕರು ಓದುವುದು ಕಡಿಮೆಯಾಗಿದ್ದು, ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದಾರೆ. ಅದರಿಂದ ಹೊರಬಂದು ಭಾಷೆಯ ಬೆಳವಣಿಗೆಗೆ ತೊಡಗಿಸಿಕೊಳ್ಳಬೇಕು. ರಾಜ್ಯದಲ್ಲಿ ದೇಶದ ಎಲ್ಲ ಜನರು ನೆಲೆಸಿದ್ದಾರೆ. ಅವರು ತಮ್ಮ ಮನೆಗಳಲ್ಲಿ ಮಾತೃಭಾಷೆಗಳಲ್ಲಿ ಮಾತನಾಡಲಿ, ಆದರೆ ಹೊರಗೆ ಬಂದಾಗ ಕನ್ನಡ ಭಾಷೆಯನ್ನು ಮಾತನಾಡಿ ಕನ್ನಡಕ್ಕೆ ಗೌರವ ನೀಡಬೇಕು” ಎಂದರು.
“ನಮ್ಮ ಸರ್ಕಾರ ಉನ್ನತ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತಿದೆ. ಆದ್ದರಿಂದ ಇಂದು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು” ಎಂದು ಹೇಳಿದರು.
“ಬಹುತೇಕ ಮಹಾನ್ ನಾಯಕರ ಹೋರಾಟದ ಫಲವಾಗಿ ವಿಶಾಲ ಕರ್ನಾಟಕದ ಉಗಮವಾಗಿದೆ. ಇದರ ಆಚರಣೆಯೇ ಕರ್ನಾಟಕ ರಾಜ್ಯೋತ್ಸವ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಚಂದ್ರಯಾನ ಯಶಸ್ವಿಯಾದರೂ ಮಹಿಳೆಯರ ಮೇಲಿನ ಕೀಳಿರಿಮೆ ಕಡಿಮೆಯಾಗಿಲ್ಲ: ಎನ್‌ಎಫ್‌ಐಡಬ್ಲ್ಯೂ ರಾಜ್ಯಾಧ್ಯಕ್ಷೆ
ʼನಿರಂತರ ಯೂಟ್ಯೂಬ್ ಟಿವಿʼ ಉದ್ಘಾಟನೆ: ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ವಿದ್ಯಾರ್ಥಿಗಳು ಆರಂಭಿಸಿರುವ ʼವಿಜಯ ನಿರಂತರʼ ಯೂಟ್ಯೂಬ್ ಟಿವಿಯನ್ನು ಶಾಸಕರು ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ವೈ ವೆಂಕಟೇಶಪ್ಪ, ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗುಂಡೀಗೆರೆ ವಿಶ್ವನಾಥ್, ಸುಪ್ರಸಿದ್ಧ ಗಾಯಕ ಕಡಬಗೆರೆ ಮುನಿರಾಜು, ಕನ್ನಡ ಸಂಘದ ಸಂಚಾಲಕ ಕೆ ಭೈರಪ್ಪ ಇದ್ದರು.