ಉಬರ್ ಕ್ಯಾಬ್ ಬುಕ್ ಮಾಡಿದ್ದ ಮಹಿಳೆ ಮೇಲೆ ಕ್ಯಾಬ್ ಚಾಲಕನೊಬ್ಬ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಬೋಗನಹಳ್ಳಿಯಲ್ಲಿ ನಡೆದಿದೆ.
ಕ್ಯಾಬ್ ಚಾಲಕ ಬಸವರಾಜ್ ಹಲ್ಲೆ ಮಾಡಿದ ವ್ಯಕ್ತಿ. ಬೆಂಗಳೂರಿನ ಬೋಗನಹಳ್ಳಿಯ ಮಹಿಳೆಯೊಬ್ಬರು ತಮ್ಮ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬುಧವಾರ ಬೆಳಗ್ಗೆ ಉಬರ್ ಕ್ಯಾಬ್ ಬುಕ್ ಮಾಡಿದ್ದರು.
ಮಹಿಳೆ ಬುಕ್ ಮಾಡಿದ್ದ ಸ್ಥಳಕ್ಕೆ ಮತ್ತೊಂದು ಕ್ಯಾಬ್ ಬಂದು ನಿಂತಿತ್ತು. ಆಸ್ಪತ್ರೆಗೆ ಹೋಗುವ ಅವಸರದಲ್ಲಿದ್ದ ಮಹಿಳೆ ತಾನು ಬುಕ್ ಮಾಡಿದ ಕ್ಯಾಬ್ ಇದೇ ಎಂದು ಮಗನೊಂದಿಗೆ ಕ್ಯಾಬ್ನಲ್ಲಿ ಕುಳಿತಿದ್ದಾಳೆ. ಬಳಿಕ ಇದು ಬೇರೆ ಕ್ಯಾಬ್, ತಾನು ಬುಕ್ ಮಾಡಿದ ಕ್ಯಾಬ್ ಇನ್ನು ಬಂದಿಲ್ಲ ಎಂದು ಗಮನಕ್ಕೆ ಬಂದಿದೆ. ಕೂಡಲೇ ಮಹಿಳೆ ಕಾರ್ನಿಂದ ಇಳಿಯಲು ಮುಂದಾಗಿದ್ದಾರೆ. ಈ ವೇಳೆ ಚಾಲಕ ಕಾರು ಚಲಾಯಿಸಿದ್ದಾನೆ. ಕಾರಿನಿಂದ ಇಳಿಯಲು ಪ್ರಯತ್ನ ಮಾಡಿದರೂ ಕೂಡ ಕ್ಯಾಬ್ ನಿಲ್ಲಿಸಿ, ಆ ಬಳಿಕ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ.
ಈ ವೇಳೆ, ತಾಯಿಯ ರಕ್ಷಣೆಗೆ ಮಗ ಮುಂದಾಗಿದ್ದಾನೆ. ಆಗ ಬಾಲಕನ ಮೇಲೆಯೂ ಚಾಲಕ ಹಲ್ಲೆ ಮಾಡಿದ್ದಾನೆ. ಸ್ಥಳೀಯರು ಬಂದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ಮೂರು ದಿನ ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ
ಈ ಘಟನೆಯ ದೃಶ್ಯ ಅಪಾರ್ಟ್‌ಮೆಂಟ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ಬಗ್ಗೆ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಮಹಿಳೆಯ ಪತಿ ಅಜಯ್ ಅಗರ್ವಾಲ್ ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
“ಅಪಾರ್ಟ್‌ಮೆಂಟ್‌ನಲ್ಲಿ ಎರಡು ಕ್ಯಾಬ್‌ಗಳು ಬುಕ್ ಆಗಿದ್ದವು. ಈ ವೇಳೆ, ಬಸವರಾಜ್ ಅಪಾರ್ಟ್‌ಮೆಂಟ್ ಬಳಿ ಬಂದಿದ್ದಾರೆ. ಮಗನನ್ನು ಆಸ್ಪತ್ರೆಗೆ ತೋರಿಸುವ ಧಾವಂತದಲ್ಲಿ ಇದ್ದ ಮಹಿಳೆಯು ಅಪಾರ್ಟ್‌ಮೆಂಟ್ ಮುಂದೆ ಬಂದ ಕ್ಯಾಬ್ ಅನ್ನು ಹತ್ತಿದ್ದಾಳೆ. ಕ್ಯಾಬ್ ಸ್ವಲ್ಪ ದೂರ ಕ್ರಮಿಸಿದ ನಂತರ ಕ್ಯಾಬ್ ಚಾಲಕನಿಗೆ ಕಾರ್ ನಿಲ್ಲಿಸುವಂತೆ ಏಕವಚನದಲ್ಲಿ ನಿಂದಿಸಿದ್ದಾಳೆ. ಕೆಲ ಸಮಯ ಕಾರಿನಲ್ಲಿ ಮಾತಿಗೆ ಮಾತು ಬೆಳೆದಿದೆ. ಬಳಿಕ ಕಾರ್ ಇಳಿಯುವಾಗ ಮಹಿಳೆ ಜೋರಾಗಿ ಕಾರ್ ಡೋರ್ ಹಾಕಿದ್ದಾರೆ. ಇದರಿಂದ ಕೋಪಗೊಂಡ ಚಾಲಕ ಮಹಿಳೆಯನ್ನು ನೂಕಿದ್ದಾನೆ” ಎಂದು ತಿಳಿದುಬಂದಿದೆ.
ಸದ್ಯ ಬೆಳ್ಳಂದೂರು ಪೊಲೀಸರು ಕ್ಯಾಬ್ ಚಾಲಕ ಬಸವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.