ಬೆಂಗಳೂರಿನ ಮಡಿವಾಳ ಪ್ರದೇಶದ ಮಾರುತಿ ನಗರದಲ್ಲಿ ಮನೆಯೊಂದರಲ್ಲಿ ದರೋಡೆ ಮಾಡಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಬರೋಬ್ಬರಿ 150 ಪ್ರಕರಣಗಳಲ್ಲಿ ಆರೋಪಿಯಾಗಿರುವ ಅಂತಾರಾಜ್ಯ ಕಳ್ಳನೆಂದು ತಿಳಿದುಬಂದಿದೆ.
ಜನವರಿ 9ರಂದು ಮಾರುತಿ ನಗರದಲ್ಲಿ ದರೋಡೆ ನಡೆದಿತ್ತು. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿರುವ ಪಂಚಾಕ್ಷರಿ ಸಂಗಯ್ಯ ಸ್ವಾಮಿ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದಲ್ಲಿ ಒಟ್ಟು 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.
ಆರೋಪಿಯನ್ನು ಮಡಿವಾಳದ ಮಾರುಕಟ್ಟೆ ಪ್ರದೇಶದಲ್ಲಿ ಬಂಧಿಸಲಾಗಿದೆ. ಅತನಿಂದ 181 ಗ್ರಾಮ್ ಚಿನ್ನ, 333 ಗ್ರಾಮ್ ಬೆಳ್ಳಿ ಹಾಗೂ 12.25 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ರಾಜ್ಯಗಳಲ್ಲಿ ದರೋಡೆ ಮಾಡುತ್ತಿದ್ದ ಸ್ವಾಮಿ, ಐಷಾರಾಮಿ ಜೀವನ ನಡೆಸುತ್ತಿದ್ದ. ತನ್ನ ಗೆಳತಿಗೂ 3 ಕೋಟಿ ರೂ. ಮೌಲ್ಯದ ಮನೆ ಕೊಡಿಸಿದ್ದ ಎಂದು ತಿಳಿದುಬಂದಿದೆ.
ಆರೋಪಿ ಸ್ವಾಮಿ 2003ರಲ್ಲಿ 15 ವರ್ಷದವನಿದ್ದಾಗಲೇ ಲ್ಯಾಪ್‌ಟಾಪ್ ಕದಿಯುತ್ತಿದ್ದ. ಆತನನ್ನು 2012ರಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು. ನಂತರ, ಜೈಲಿನಿಂದ ಬಿಡುಗಡೆಯಾಗಿದ್ದ. 2016ರಲ್ಲಿ, ಗುಜರಾತ್‌ನಲ್ಲಿ ದರೋಡೆ ಮಾಡಿದ್ದ ಆತನಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿನಿಂದ ಹೊರಬಂದ ಬಳಿಕ, ಮತ್ತೆ ದರೋಡೆ ಆರಂಭಿಸಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದ್ದಾರೆ.