- ಸುಮಾರು 200 ಟ್ರೇಗಳಲ್ಲಿದ್ದ ಟೊಮ್ಯಾಟೊ ಕಳೆದುಕೊಂಡ ರೈತ ಕಂಗಾಲು
- ಆರ್ಎಮ್ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಜ್ಯದಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾದ ಬೆನ್ನಲ್ಲೆ ಕಳವು ಪ್ರಕರಣಗಳು ವರದಿಯಾಗುತ್ತಿದ್ದು, ಸುಮಾರು 2 ಟನ್‌ಗೂ ಹೆಚ್ಚು ಟೊಮ್ಯಾಟೊ ಇದ್ದ ಬೊಲೆರೋ ವಾಹನವನ್ನು ಕಳ್ಳರು ಕಳವುಗೈದು ಪರಾರಿಯಾಗಿದ್ದಾರೆ.
ಸೋಮವಾರ (ಜು.8)ದಂದು ನಗರದ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಈ ಘಟನೆ ನಡೆದಿದೆ. ಟೊಮ್ಯಾಟೊ ಬೆಳೆದ ರೈತ ಹಿರಿಯೂರಿನಿಂದ ಕೋಲಾರದ ಕಡೆಗೆ ಸಾಗಿಸುತ್ತಿದ್ದರು. ಈ ವೇಳೆ, ಕಾರಿನಲ್ಲಿ ಬಂದ ಮೂವರು ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.
ನಂತರ ಆರ್ಎಮ್ಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ವಾಹನವನ್ನು ಅಡ್ಡಗಟ್ಟಿ, ಪೀಣ್ಯ ಬಳಿ ನಿಮ್ಮ ಬೊಲೆರೋ ವಾಹನದಿಂದ ನಮ್ಮ ಗಾಡಿಗೆ ಟಚ್ ಮಾಡಿದ್ದೀರಿ ಎಂದು ಜಗಳ ಆರಂಭಿಸಿ, ಬೊಲೆರೋ ಚಾಲಕ ಮತ್ತು ರೈತನ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೊಬೈಲ್ ಕಿತ್ತುಕೊಂಡು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ನಂತರ ಟೊಮ್ಯಾಟೊ ಕಂಡ ಅವರು ಬೊಲೆರೋ ಸಮೇತ ಕದ್ದು, ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಆರ್ಎಮ್ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎರಡು ಟನ್ ಟೊಮ್ಯಾಟೊ ಕಳೆದುಕೊಂಡು ರೈತ ಕಂಗಾಲಾಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ಹಲವೆಡೆ ಭಾರೀ ಮಳೆ : ಜನಜೀವನ ಅಸ್ತವ್ಯಸ್ತ
ಹವಾಮಾನ ವೈಪರೀತ್ಯದಿಂದಾಗಿ ಕಳೆದ ಕೆಲವು ದಿನಗಳಿಂದ ತರಕಾರಿ ಬೆಲೆ ಏರಿಕೆಯಾಗುತ್ತಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು, ಕೆಜಿ ತೆಗೆದುಕೊಳ್ಳುವ ತರಕಾರಿಯನ್ನು ಅರ್ಧ ಕೆಜಿ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ಟೊಮ್ಯಾಟೊ ಪ್ರತಿ ಕೆಜಿಗೆ ₹110 ಆಗಿದೆ. ಟೊಮ್ಯಾಟೊ ಬೆಲೆ ಗಗನಕ್ಕೇರಿರುವ ನಡುವೆಯೇ ಕಳವು ಪ್ರಕರಣಗಳು ಕೂಡ ವರದಿಯಾಗುತ್ತಿದೆ.