ಆಗಸ್ಟ್ 26ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುವ ಹಿನ್ನೆಲೆ, ನಗರದ ಹಲವೆಡೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಪ್ರಕಟಣೆ ತಿಳಿಸಿದೆ.
ಇತ್ತೀಚೆಗೆ ಚಂದ್ರಯಾನ-3 ಯಶಸ್ವಿಯಾಗಿರುವ ಹಿನ್ನೆಲೆ ಇಸ್ರೋದ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸದ್ಯ ಪ್ರಧಾನಮಂತ್ರಿ ಮೋದಿ ಅವರು ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ಬ್ರಿಕ್ಸ್ ಶೃಂಗಸಭೆಯ ನಂತರ ಅವರು ಗ್ರೀಸ್ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಶನಿವಾರ ಬೆಳಗ್ಗೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಅವರು ಬಂದಿಳಿಯಲಿದ್ದಾರೆ. ಈ ಹಿನ್ನೆಲೆ ಶನಿವಾರ ಬೆಳಗ್ಗೆ 4:30 ರಿಂದ ಬೆಳಗ್ಗೆ 9:30ರ ವರೆಗೆ ನಗರದ ಕೆಲ ರಸ್ತೆಗಳ ಸಂಚಾರ ಮಾರ್ಗ ಬದಲಾವಣೆಯಾಗಿದೆ.
ರಸ್ತೆ ಮಾರ್ಗ ಬದಲಾವಣೆ ಎಲ್ಲೆಲ್ಲಿ?
- ಹಳೆಯ ಏರ್‌ಪೋರ್ಟ್ ರಸ್ತೆ
- ಹಳೆಯ ಮದ್ರಾಸ್ ರಸ್ತೆ
- ಎಂ.ಜಿ.ರಸ್ತೆ
- ಕಬ್ಬನ್ ರಸ್ತೆ
- ರಾಜಭವನ ರಸ್ತೆ
- ಬಳ್ಳಾರಿ ರಸ್ತೆ (ಮೇಖ್ರಿ ಸರ್ಕಲ್)
- ಸಿವಿ ರಾಮನ್ ರಸ್ತೆ
- ಯಶವಂತಪುರ ಫ್ಲೈ ಓವರ್
- ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರದವರೆಗೆ)
- ಮಾಗಡಿ ರಸ್ತೆ, ಹೊರವರ್ತುಲ ರಸ್ತೆ (ಗೊರಗುಂಟೆ ಪಾಳ್ಯ ಜಂಕ್ಷನ್‌ನಿಂದ ಸುಮನಹಳ್ಳಿ)
- ಗುಬ್ಬಿ ತೋಟದಪ್ಪ ರಸ್ತೆ
- ಜಾಲಹಳ್ಳಿ ಕ್ರಾಸ್ ರಸ್ತೆ
ಇನ್ನು ಆಗಸ್ಟ್ 26ರ ಬೆಳಗಿನ ಜಾವ 4 ಗಂಟೆಯಿಂದ ಬೆಳಗ್ಗೆ 11 ಗಂಟೆಯವರೆಗೆ ಭಾರೀ ಸರಕು ಸಾಗಾಣಿಕೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಇಸ್ರೋ ಸಾಧನೆ ಐತಿಹಾಸಿಕವಾದದ್ದು : ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘನೆ
ಸಾರ್ವಜನಿಕರು ಈ ರಸ್ತೆಗಳ ಬದಲಾಗಿ ಪರ್ಯಾಯ ಮಾರ್ಗ ಬಳಕೆಗೆ ಬೆಂಗಳೂರು ಸಂಚಾರ ಪೋಲಿಸರು ಮನವಿ ಮಾಡಿದ್ದಾರೆ.
ಈ ವೇಳೆ ಪ್ರಧಾನಿ ಮೋದಿ ಅವರು ಪೀಣ್ಯದಲ್ಲಿ ಸುಮಾರು 1 ಕಿಲೋಮೀಟರ್ ರೋಡ್ಶೋ ನಡೆಸುವ ಸಾಧ್ಯತೆಯಿದೆ. ಮೋದಿ ಅವರ ಸ್ವಾಗತಕ್ಕೆ ಎಚ್ಎಎಲ್ ಏರ್ಪೋರ್ಟ್ನಲ್ಲಿ 5 ರಿಂದ 6 ಸಾವಿರ ಜನರನ್ನು ಸೇರಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.