- ಪಾಲಿಕೆಯ 8 ವಲಯಗಳಲ್ಲಿ ಒಟ್ಟು 2,79,335 ಬೀದಿನಾಯಿಗಳಿವೆ
- 2023ರ ಜುಲೈ 11 ರಿಂದ 2023ರ ಆಗಸ್ಟ್ 2ರವರೆಗೆ ನಡೆದ ಸಮೀಕ್ಷೆ
50 ತಂಡಗಳ ಸಹಯೋಗದೊಂದಿಗೆ ಒಟ್ಟು 12 ದಿನಗಳಲ್ಲಿ ಬೀದಿನಾಯಿಗಳ ಸಮೀಕ್ಷೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಪಶುಪಾಲನಾ ವಿಭಾಗ ಪೂರ್ಣಗೊಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಮೀಕ್ಷೆ ನಡೆಸಿರುವ ಸಂಬಂಧ ಆರೋಗ್ಯ ಹಾಗೂ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರರವರು ವರದಿಯನ್ನು ಬಿಡುಗಡೆಗೊಳಿಸಿದರು.
“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 8 ವಲಯಗಳಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿ ರೇಬೀಸ್ ಲಸಿಕಾ ಕಾರ್ಯಕ್ರಮದ ಯಶಸ್ವಿ ಅನುಷ್ಠಾನದ ಬಗ್ಗೆ ವಸ್ತುನಿಷ್ಠ ಮಾಹಿತಿಯನ್ನು ಪಡೆಯಲು, ಬೀದಿನಾಯಿಗಳ ಹಾವಳಿ ಹಾಗೂ ಅವುಗಳ ನಿಯಂತ್ರಣಕ್ಕೆ ಸೂಕ್ತ ಯೋಜನೆಗಳನ್ನು ರೂಪಿಸಲು ಎನ್‌ಎಪಿಆರ್‌ಇ (NAPRE) ಶಿಫಾರಸ್ಸು ಮಾಡಿರುವ ಸೈಟ್-ರಿಸೈಟ್ (Sight–Resight) ವಿಧಾನವನ್ನು ಅಳವಡಿಸಿಕೊಂಡು ಬೀದಿನಾಯಿಗಳ ಸಮೀಕ್ಷೆಯನ್ನು 2023ರ ಜುಲೈ 11 ರಿಂದ 2023ರ ಆಗಸ್ಟ್ 2ರವರೆಗೆ ನಡೆಸಲಾಗಿದೆ” ಎಂದು ಬಿಬಿಎಂಪಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
“ಬೀದಿ ನಾಯಿ ಸಮೀಕ್ಷೆಯನ್ನು ICAR-NIVEDI, WVS(Mission Rabies)ಯ ಪ್ರಿನ್ಸಿಪಾಲ್ ಸೈಂಟಿಸ್ಟ್(BIOSTATISTICS) ಡಾ. ಕೆ.ಪಿ.ಸುರೇಶ್ ಸಂಸ್ಥೆ, ಬಿಬಿಎಂಪಿ ಪಶುಪಾಲನಾ ವಿಭಾಗದ ಅಧಿಕಾರಿಗಳು-ಸಿಬ್ಬಂದಿ, ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಅರೆತಾಂತ್ರಿಕ ಸಿಬ್ಬಂದಿಯವರ (ಒಟ್ಟು 100 ಸಮೀಕ್ಷೆದಾರರು ಹಾಗೂ 15 ಮೇಲ್ವಿಚಾರಕರು) ಒಟ್ಟು 50 ತಂಡಗಳ ಸಹಯೋಗದೊಂದಿಗೆ ಒಟ್ಟು 12 ದಿನಗಳಲ್ಲಿ ಬೀದಿನಾಯಿಗಳ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ” ಎಂದು ತಿಳಿಸಿದೆ.
“ಬಿಬಿಎಂಪಿಯ ನಾಲ್ಕು ವಿಭಾಗಗಳಾದ ವಸತಿ ಪ್ರದೇಶ, ಕೊಳಚೆ ಪ್ರದೇಶ, ವಾಣಿಜ್ಯ ಪ್ರದೇಶ ಹಾಗೂ ಕೆರೆಗಳನ್ನು 0.5 ಚ.ಕಿ.ಮೀ ವ್ಯಾಪ್ತಿಯ 6850 ಮೈಕ್ರೋಜೋನ್‌ಗಳನ್ನಾಗಿ ವಿಂಗಡಣೆ ಮಾಡಿದ್ದು, ಅದರಲ್ಲಿ ಶೇ.20ರಷ್ಟು ರ‍್ಯಾಂಡಂ ಸ್ಯಾಂಪಲ್‌ಗಳನ್ನು ಅಂದರೆ 1360 ಮೈಕ್ರೋಜೋನ್‌ಗಳನ್ನು ಸಮೀಕ್ಷೆ ಮಾಡಲು ಆಯ್ಕೆ ಮಾಡಲಾಗಿದೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬಿಎಂಟಿಸಿ ನಕಲು ಸಹಿ ಅಕ್ರಮ | 7 ಜನರ ವಿರುದ್ಧ ಎಫ್‌ಐಆರ್ ದಾಖಲು; ಓರ್ವನ ಬಂಧನ
“ಈ ಬಾರಿ ಕೈಗೊಂಡಿರುವ ಸಮೀಕ್ಷೆಯಲ್ಲಿ ಪಾಲಿಕೆಯ 8 ವಲಯಗಳಲ್ಲಿ ಒಟ್ಟು 2,79,335 ಬೀದಿನಾಯಿಗಳು ಕಂಡುಬಂದಿವೆ. 2019ನೇ ಸಾಲಿನ ಬೀದಿನಾಯಿಗಳ ಸಮೀಕ್ಷೆಯಲ್ಲಿ 3.10 ಲಕ್ಷ ಬೀದಿನಾಯಿಗಳು ಇದ್ದವು. ಶೇಕಡ 51.16ರಷ್ಟು ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯಾಗಿದೆ ಎಂದು ಅಂದಾಜಿಸಲಾಗಿತ್ತು. ಹಾಲಿ ಕೈಗೊಂಡಿರುವ ಸಮೀಕ್ಷೆಯಲ್ಲಿ ಒಟ್ಟು ಶೇಕಡ 71.85ರಷ್ಟು ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯಾಗಿದೆ. ಒಟ್ಟಾರೆಯಾಗಿ ಶೇಕಡ 20ರಷ್ಟು ಸಂತಾನಹರಣ ಶಸ್ತ್ರ ಚಿಕಿತ್ಸೆ ಪ್ರಮಾಣ ಹೆಚ್ಚಳವಾಗಿದೆ. ಬೀದಿನಾಯಿ ಮರಿಗಳ ಸಂಖ್ಯೆಯು ಕಡಿಮೆಯಾಗಿದೆ. ಪ್ರಸ್ತುತ ಸಾಲಿನ ಸಮೀಕ್ಷೆಯ ವರದಿಯಂತೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇಕಡ 10 ರಷ್ಟು ಬೀದಿನಾಯಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದರಿಂದ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿಸಿರುವುದರಿಂದ ಬೀದಿನಾಯಿಗಳ ಸಂಖ್ಯೆಯು ಇಳಿಕೆಯಾಗಿದೆ. ನಗರದ ಪೂರ್ವವಲಯದಲ್ಲಿ 37685, ಪಶ್ಚಿಮ 22025, ದಕ್ಷಿಣ 23241, ದಾಸರಹಳ್ಳಿ 21221, ಆರ್.ಆರ್.ನಗರ 41266, ಬೊಮ್ಮನಹಳ್ಳಿ 39183, ಯಲಹಂಕ 36343 ಹಾಗೂ ಮಹದೇವಪುರದಲ್ಲಿ 58371 ಬೀದಿನಾಯಿಗಳಿವೆ. ಬೆಂಗಳೂರಿನಲ್ಲಿ ಒಟ್ಟು 2,79,335 ಬೀದಿನಾಯಿಗಳಿವೆ ಎಂದು ಮಾಹಿತಿ ನೀಡಿದೆ.