ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಬಿಎಂಪಿಯ ಮತ್ತಿಕೆರೆ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯ (ವಿಐಟಿಎಮ್) ಹಾಗೂ ಬಾಹ್ಯಾಕಾಶ ಇಲಾಖೆ(ಇಸ್ರೋ) ವತಿಯಿಂದ “ಸಂಚಾರಿ ವಿಜ್ಞಾನ ಪ್ರದರ್ಶನ” ಏರ್ಪಡಿಸಲಾಗಿದೆ.
ಕಾಲೇಜಿನ ಪ್ರಾಂಶುಪಾಲರಾದ ಜಿ.ಎನ್ ಆನಂದ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಪಾಲಿಕೆ ಮತ್ತಿಕೆರೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 2 ಸಂಚಾರಿ ವಿಜ್ಞಾನ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭೇಟಿ ನೀಡಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಮಂಗಳವಾರವೂ ವಿಜ್ಞಾನ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಬಿಬಿಎಂಪಿ ತಿಳಿಸಿದೆ.
ಇಸ್ರೋ ಸಂಸ್ಥೆಯ ಸಾಧನೆಯಾದ ಆರ್ಯಭಟದಿಂದ ಚಂದ್ರಯಾನ-2 ರವರೆಗಿನ ಎಲ್ಲ ರಾಕೆಟ್, ಸ್ಯಾಟ್‌ಲೈಟ್ ಮಾದರಿಗಳನ್ನು ಸಂಚಾರಿ ಬಸ್ಸಿನಲ್ಲಿ ಇರಿಸಲಾಗಿದೆ. ಇಸ್ರೋ ಭಾರತದ ಹೆಮ್ಮೆ, ಇದರ ಸಾಧನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದೇ ಇದರ ಮುಖ್ಯ ಉದ್ದೇಶವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಜ್ಞಾನವನ್ನು ಹೆಚ್ಚಿಸಲಿದೆ.
ಈ ಸುದ್ದಿ ಓದಿದ್ದೀರಾ? ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ: ಸಿಎಂ ಸಿದ್ದರಾಮಯ್ಯ
“ಎಲ್ಲ ವಿದ್ಯಾರ್ಥಿಗಳು ಇಸ್ರೋ ಮತ್ತು ವಿಐಟಿಎಮ್ ಹೋಗಲು ಸಾಧ್ಯವಾಗುವುದಿಲ್ಲ ಹಾಗಾಗಿ ವಿದ್ಯಾರ್ಥಿಗಳಿದ್ದಲ್ಲಿಗೆ ಸಂಚಾರಿ ವಾಹನದ ಮೂಲಕ ವಿಜ್ಞಾನ ಜ್ಞಾನವನ್ನು ಮೂಡಿಸುವುದು ಇದರ ಉದ್ದೇಶವಾಗಿದೆ. ವಿಐಟಿಎಮ್ ಸಂಸ್ಥೆಯ ಸಂಚಾರಿ ವಾಹನದಲ್ಲಿ ವಿದ್ಯುತ್ ಮತ್ತು ಕಾಂತತ್ವದ ಕುರಿತಾದ ಸುಮಾರು 20 ವರ್ಕಿಂಗ್ ಮಾಡಲ್ ಇಡಲಾಗಿದೆ” ಎಂದು ಕಾಲೇಜಿನ ಪ್ರಾಂಶುಪಾಲ್ ಆನಂದ್ ಅವರು ತಿಳಿಸಿದರು.
ಇಸ್ರೋ ಸಂಸ್ಥೆಯಿಂದ ವಿಜ್ಞಾನಿಯಾದ ಹೆಚ್ ಎಲ್ ಶ್ರೀನಿವಾಸ್ ಹಾಗೂ ವಿಐಟಿಎಮ್ ಸಂಸ್ಥೆಯ ಶಿಕ್ಷಣಾಧಿಕಾರಿಯಾದ ಪ್ರಶಾಂತ್ ಕುಮಾರ್ ಬಿಸ್ವಾಲ್ ವಿಜ್ಞಾನ ಪ್ರದರ್ಶನದ ಮೇಲುಸ್ತುವಾರಿ ವಹಿಸಿದ್ದರು.