ಹಾಸ್ಟೆಲ್ ಕ್ಯಾಂಟೀನ್‌ಗಳಲ್ಲಿ ಗುಣಮಟ್ಟದ ಆಹಾರ ನೀಡುವಂತೆ ಒತ್ತಾಯಿಸಿ ಬೆಂಗಳೂರು ವಿಶ್ವವಿದ್ಯಾಲಯ (ಬಿಯು) ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನಲ್ಲಿ ನೆಲೆಸಿರುವ ಸ್ನಾತಕೋತ್ತರ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ 650ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ವಿವಿ ಹಾಸ್ಟೆಲ್‌ನಲ್ಲಿ ನೆಲೆಸಿದ್ದಾರೆ. ಸೋಮವಾರ ರಾತ್ರಿ ನೀಡಿದ ಅನ್ನದಲ್ಲಿ ಹುಳುಗಳು ಕಂಡುಬಂದಿದ್ದು, ಹಾಸ್ಟೆಲ್ ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
“ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಿದ್ದಾರೆ. ಅಕ್ಕಿಯಲ್ಲಿ ಹುಳುಗಳು ಮತ್ತು ಕೀಟಗಳು ಕಾಣಿಸಿಕೊಂಡಿವೆ. ವಿದ್ಯಾರ್ಥಿಗಳ ಊಟದ ವಿಚಾರದಲ್ಲಿ ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಲವು ಬಾರಿ ಈ ಬಗ್ಗೆ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಅವರನ್ನು ಅಮಾನತುಗೊಳಿಸಬೇಕು” ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
“ಇದು ಹೊಸದೇನಲ್ಲ ಮತ್ತು ಇದು ಹಲವಾರು ತಿಂಗಳುಗಳಿಂದ ನಡೆಯುತ್ತಿದೆ. ಕೇವಲ ಅಕ್ಕಿ ಮಾತ್ರವಲ್ಲ, ಹಾಸ್ಟೆಲ್‌ನಲ್ಲಿ ನೀಡಲಾಗುವ ಎಲ್ಲ ಆಹಾರವು ಕಳಪೆ ಗುಣಮಟ್ಟದ್ದಾಗಿದೆ. ಇದನ್ನು ಉಪಕುಲಪತಿ, ರಿಜಿಸ್ಟ್ರಾರ್ ಮತ್ತು ಇತರ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ” ಎಂದು ವಿದ್ಯಾರ್ಥಿಯೊಬ್ಬರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಎಲೆಕ್ಟ್ರಾನಿಕ್ ಸಿಟಿ – ಮಾದವಾರ ಬಿಎಂಟಿಸಿ ಬಸ್ ಸೇವೆ ಆರಂಭ
ಹಾಸ್ಟೆಲ್‌ನಲ್ಲಿ ಊಟ, ನೀರು, ಮೂಲಭೂತ ಸೌಲಭ್ಯ ವ್ಯವಸ್ಥಿತವಾಗಿಲ್ಲ. ಹುಳು ಉಪ್ಪಟೆ ಇರುವ ಆಹಾರ ತಿಂದು ಜೀವಕ್ಕೆ ಅಪಾಯವಾದರೆ ಯಾರು ಹೊಣೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ವಾರ್ಡನ್ ಹಾಗೂ ಅಡುಗೆಯವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ಬೆಂವಿವಿ ಉಪಕುಲಪತಿ ಜಯಕರ ಶೆಟ್ಟಿ ಅವರಿಗೆ ಸೂಚನೆ ನೀಡಿದ್ದಾರೆ.