ಬೆಸ್ಕಾಂನಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 30 ವರ್ಷದ ಯುವತಿಗೆ ಆಕೆಯ ನೆಲೆಸಿದ್ದ ಪಿಜಿಯಲ್ಲಿ ಚಾಕು ತೋರಿಸಿ ಕಿರುಕುಳ ನೀಡಿ, ದರೋಡೆ ಮಾಡಿರುವ ಘಟನೆ ಬೆಂಗಳೂರಿ ಜುಡೀಶಿಯಲ್ ಲೇಔಟ್‌ನಲ್ಲಿ ನಡೆದಿದೆ. ಆಕೆಗೆ ಕಿರುಕುಳ ನೀಡಿ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಯುವತಿಯು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಆಗಸ್ಟ್ 11ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೆಲಸದಿಂದ ಪಿಜಿಗೆ ಹಿಂದುರಿಗಿದೆ. ಆಗ, ಅಪರಿಚಿತ ವ್ಯಕ್ತಿ ಬಾಗಿಲು ತಟ್ಟಿದರು. ಸ್ಥಳೀಯರು ಇರಬಹುದೆಂದು ಬಾಗಿಲು ತೆರೆದೆ. ಒಳ ನುಗ್ಗಿದ ಆ ವ್ಯಕ್ತಿ, ನನ್ನ ಕುತ್ತಿಗೆಗೆ ಚಾಕು ಹಿಡಿದು, ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಕಸಿದುಕೊಂಡಿದ್ದಾನೆ. ಅಲ್ಲದೆ, ಕಿರುಕುಳ ನೀಡಿದ್ದಾನೆ” ಎಂದು ಆರೋಪಿಸಿದ್ದಾರೆ.
“ಜೀವ ಹಾನಿಯ ಹೆದರಿಕೆಯಿಂದ ನಾನು ಏನೂ ಮಾಡಲಿಲ್ಲ. ಆದಾಗ್ಯೂ, ಬೆಡ್ ಮೇಲಿದ್ದ ಕೈಚೀಲದಲ್ಲಿ ಹಣವಿದೆ, ತೆಗೆದುಕೊಳ್ಳುವೆಂತೆ ಆತನಿಗೆ ಸೂಚಿಸಿದೆ. ಆತ, ಬ್ಯಾಗ್ ಕಡೆ ಕೈಹಾಕುವಾಗ ನಾನು ಆತನಿಂದ ತಪ್ಪಿಸಿಕೊಂಡು ಬಾತ್‌ರೂಮ್‌ಗೆ ಹೋಗಿ, ಬಾಗಿಲು ಲಾಕ್ ಮಾಡಿಕೊಂಡೆ. ಬಳಿಕ, ಎಚ್ಚರಿಕೆ ಅಲಾರಾಂ ಬಾರಿಸಿದೆ. ತಕ್ಷಣವೇ ಆತ ಓಡಿಹೋದ” ಎಂದು ಯುವತಿ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳವಾದ ವಸ್ತುಗಳನ್ನು ಮತ್ತು ಆರೋಪಿಯನ್ನು ಪತ್ತೆಹಚ್ಚಲು ತನಿಖೆ ನಡೆಯತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.